ರಾಕೇಶ್ ಕಿಶೋರ್ ಗಡಿಪಾರಿಗೆ ಆಗ್ರಹ: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ

Republic Party of India protest Mandya
Published on

ಮಂಡ್ಯ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿರುವ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಜತೆಗೆ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯ ಕರ್ನಾಟಕದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.

ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಡಾ.ರೋಹಿಣಿ ಅವರಿಗೆ ಮನವಿ ಸಲ್ಲಿಸಿದರು. ವಕೀಲ ರಾಕೇಶ್ ಕಿಶೋರ್ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸದೆ ಭಾರತ ಸಂವಿಧಾನಕ್ಕೆ ಅಗೌರವ ತೋರುವ ಮೂಲಕ ದೇಶದ್ರೋಹ ಕೆಲಸ ಮಾಡಿದ್ದಾರೆ. ಮನುವಾದದ ಮನಸ್ಥಿತಿಯ ಈ ವ್ಯಕ್ತಿ ನ್ಯಾಯಮೂರ್ತಿಗೆ ನ್ಯಾಯಾಲಯದಲ್ಲೇ ಶೂ ಎಸೆಯಲೆತ್ನಿಸುವ ಮೂಲಕ ಕಾನೂನಿಗೆ ಗೌರವ ಕೊಡದೆ ತಪ್ಪೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ದಲಿತ ಸಮುದಾಯಕ್ಕೆ ಸೇರಿದ ಜೀವಪರ ಚಿಂತನೆಯುಳ್ಳ ಭಾರತದ ಸಂವಿಧಾನದ ಮೇಲೆ ಅಪಾರ ಗೌರವವುಳ್ಳವರಾಗಿದ್ದಾರೆ. ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಬುಲ್ಡೋಜರ್ ನೀತಿಯ ನ್ಯಾಯವನ್ನು ವಿರೋಧಿಸಿ ತೀರ್ಪು ನೀಡಿದ್ದರು. ವಿಷ್ಣು ಮೂರ್ತಿಯ ಭಗ್ನ ಪ್ರಕರಣದಲ್ಲಿ ನೀವು ಅರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸಿ ಎಂಬ ಸಂವಿಧಾನದ ಪ್ರಕಾರ ತೀರ್ಪು ನೀಡುವ ಮೂಲಕ ನ್ಯಾಯದ ಪರ ನೀಡಿದ್ದಾರೆ. ಆದರೆ ಶೂ ಎಸೆಯಲೆತ್ನಿಸಿರುವುದನ್ನು ರಾಕೇಶ್ ಕಿಶೋರ್ ಸಮರ್ಥಿಸಿಕೊಂಡಿದ್ದಾರೆ. ಸಂವಿಧಾನವನ್ನು ಕಾಪಾಡಬೇಕಾದ ಇವರೇ ಈ ರೀತಿ ವರ್ತಿಸಿದರೆ ಭಾರತದ ಮುಂದಿನ ಭವಿಷ್ಯ ಹೇಗಿರುತ್ತದೆ. ಮನುವಾದಿ ಮನಸ್ಥಿತಿಯುಳ್ಳ ವ್ಯಕ್ತಿಗಳಿಂದಲೇ ಈ ಹಿಂದೆ ಸಂವಿಧಾನ ಪ್ರತಿಯನ್ನು ಸುಡುವಂತಹ ದೇಶದ್ರೋಹ ಕೆಲಸ ನಡೆದಿದೆ ಎಂದು ದೂರಿದರು.

ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತ ಸಂವಿಧಾನಕ್ಕೆ ಅಪಮಾನ ಮಾಡಿ ದೇಶದ್ರೋಹ ಕೆಲಸ ಮಾಡಿರುವ ವಕೀಲ ರಾಕೇಶ್ ಅವರನ್ನು ಬಂಧಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಶ್ರೀನಿವಾಸ, ಜಿಲ್ಲಾಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಬಲರಾಮ, ಉಪಾಧ್ಯಕ್ಷ ಸೋಮಶೇಖರ, ಎನ್.ಆರ್.ಸಂತೋಷ್, ಕುಮಾರ, ನಾಗರಾಜು, ಕುಮಾರ್, ಆರ‌್ಮುಗಂ, ಕುಮಾರ್, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net