

ಉಡುಪಿ: ಜಿಲ್ಲೆಯ ಹೆಬ್ರಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ. ಬರ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 13,937 ಹೆಕ್ಟೇರ್ ಭತ್ತದ ಬೆಳೆ ಹಾನಿ ಅಂದಾಜಿಸಲಾಗಿದೆ. 11. 85 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಮೊದಲನೇ ಕಂತಿನಲ್ಲಿ 19,071 ರೈತರಿಗೆ 2 .64 ಕೋಟಿ ರೂ. ಪರಿಹಾರವನ್ನು ಪಾವತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಶುಕ್ರವಾರ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಸಂದೇಶ ನೀಡಿದರು.
ರಾಜ್ಯದಾದ್ಯಂತ ತೀವ್ರ ಮಳೆಯ ಕೊರತೆಯಿಂದಾಗಿ ಬರಗಾಲದ ಛಾಯೆ ಆವರಿಸಿದೆ. ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಬರ ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಜನತಾ ದರ್ಶನಕ್ಕೆ ಜಿಲ್ಲೆಯಲ್ಲಿ ಈವರೆಗೆ 403 ಅರ್ಜಿ ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಅವುಗಳಲ್ಲಿ 401 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಎಂದರು.
ಗ್ಯಾರೆಂಟಿ ಯೋಜನೆಗಳ ಯಶಸ್ಸು
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದಲ್ಲಿ ಈತನಕ 1.17 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದು, 1.14 ಕೋಟಿಗೂ ಅಧಿಕ ಫಲಾನುಭವಿಗಳ ಖಾತೆಗೆ ತಲಾ 2000 ರೂ. ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ 2 .16 ಲಕ್ಷ ಜನರ ನೋಂದಾಣಿಯಾಗಿದ್ದು 2.2 ಲಕ್ಷ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.
ಶಕ್ತಿ ಯೋಜನೆಯಲ್ಲಿ ಈವರೆಗೆ ರಾಜ್ಯದಲ್ಲಿ ಒಟ್ಟಾರೆ 100 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆ ಸೌಲಭ್ಯದ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಬಸ್ ಸೌಲಭ್ಯಗಳನ್ನು ಒದಗಿಸಲು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ 825 ಸಾಮಾನ್ಯ ಹಾಗೂ 185 ವಿದ್ಯುತ್ ಚಾಲಿತ ಬಸ್ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 71 .32 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯೋಜನ ಪಡೆದಿದ್ದಾರೆ. 26.59 ಕೋಟಿ ರೂ. ಸರ್ಕಾರದಿಂದ ಭರಿಸಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 48 ಯೂನಿಟ್ ಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ 10 ಅರ್ಹತಾ ಯೂನಿಟ್ ವಿದ್ಯುತ್ ಒದಗಿಸಲಾಗುವುದು. ಗೃಹಜ್ಯೋತಿ ಯೋಜನೆಯಡಿ ಈವರೆಗೆ ರಾಜ್ಯದಲ್ಲಿ 1.62 ಕೋಟಿ ಜನರು ನೋಂದಾಯಿಸಿಕೊಂಡಿದ್ದು 1.56 ಕೋಟಿಗೂ ಅಧಿಕ ಕುಟುಂಬಗಳಿಗೆ ಈ ಯೋಜನೆ ಸೌಲಭ್ಯ ದೊರಕಿದೆ. ಜಿಲ್ಲೆಯಲ್ಲಿ 3 ಲಕ್ಷದ 12 ಸಾವಿರ ಜನ ನೋಂದಾಯಿಸಿಕೊಂಡಿದ್ದು, ಈವರೆಗೆ 77 ಕೋಟಿ ರೂ. ಸರ್ಕಾರದಿಂದ ಭರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಈವರೆಗೆ 1,12,56,000 ಸಾವಿರ ಪಡಿತರ ಕಾರ್ಡಿನ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಒಟ್ಟು 639 ಕೋಟಿ ರೂ. ವರ್ಗಾಯಿಸಲಾಗಿದೆ. ಜಿಲ್ಲೆಯಲ್ಲಿ 28 ಸಾವಿರ ಅಂತ್ಯೋದಯ ಕಾರ್ಡ್ ಹಾಗೂ 1 .68 ಲಕ್ಷ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಪ್ರತಿಯೊಬ್ಬರಿಗೂ 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಈವರೆಗೆ 73 ಕೋಟಿ ರೂ. ಮೊತ್ತವನ್ನು ಪಾವತಿಸಲಾಗಿದೆ.
ಯುವನಿಧಿಗೆ ರಾಜ್ಯಾದ್ಯಂತ 1.4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1,781 ಜನ ಅರ್ಹ ಫಲಾನುಭವಿಗಳ ನೋಂದಣಿಯಾಗಿದೆ. ಇವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬಂಡವಾಳ ಹೂಡಿಕೆಗೆ ಕ್ರಮ
ರಾಜ್ಯದಲ್ಲಿ ಉದ್ಯೋಗ ಸೃಜನೆಗೆ ಆದ್ಯತೆ ನೀಡಲಾಗಿದ್ದು, ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನ ಸಮಿತಿಯಲ್ಲಿ 73 ಯೋಜನೆಗಳಿಗೆ ಅನುಮೋದನೆ ನೀಡುವುದರೊಂದಿಗೆ 3,935 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಅಂದಾಜು 14,500 ಉದ್ಯೋಗ ಸೃಷ್ಟಿಯಾಗಲಿದೆ. ಜಿಲ್ಲೆಯ ಹೆಬ್ರಿ ತಾಲೂಕು ಕೆರೆಬೆಟ್ಟು, ಶಿವಪುರ ಗ್ರಾಮದಲ್ಲಿ 114 ಎಕ್ರೆ ಹಾಗೂ ಕಾರ್ಕಳದ ನಿಟ್ಟೆಯಲ್ಲಿ 51 ಎಕ್ರೆ ಜಮೀನಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಕಾಪು ತಾಲೂಕಿನ ಎಲ್ಲೂರು ಹಾಗೂ ಸಾಂತೂರು ಗ್ರಾಮದಲ್ಲಿ 942 ಎಕ್ರೆ ಸ್ಥಳ ಪರಿಶೀಲನೆ ಮಾಡಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕೈಗಾರಿಕೆ ಸ್ಥಾಪನೆಯ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಸ್ಥಳಿಯ ಜನರಿಗೆ ಉದ್ಯೋಗ ಲಭಿಸುವಂತೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮೀನುಗಾರಿಕೆಯಲ್ಲಿ ತೊಡಗಿರುವ ಯಾಂತ್ರೀಕೃತ ದೋಣಿಗಳಿಗೆ 73,808 ಕಿಲೋ ಲೀಟರ್ ಮಾರಾಟ ಕರರಹಿತ ಡೀಸೆಲ್, 5074 ಪರ್ಮಿಟ್ ಹೊಂದಿರುವ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ, ಜೀವ ರಕ್ಷಕ ಕಿಟ್ಟುಗಳು ಸೇರಿದಂತೆ ಮೀನುಸಾಗಾಟ ವಾಹನಕ್ಕೆ ಸಹಾಯಧನ ಒದಗಿಸಲಾಗಿದೆ ಎಂದರು.
ವಿವೇಕ ಶಾಲಾ ಕಟ್ಟಡ ನಿರ್ಮಾಣಕ್ಕೆ 18 ಕೋಟಿ
ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯ ಹಾಗೂ ವಸತಿ ಶಾಲೆಗಳಿಗೆ 6,036 ವಿದ್ಯಾರ್ಥಿಗಳು ದಾಖಲಾಗಿದ್ದು, ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. 2,567 ವಿದ್ಯಾರ್ಥಿಗಳಿಗೆ 1.46 ಕೋಟಿ ರೂ. ಶುಲ್ಕ ವಿನಾಯಿತಿ ನೀಡಲಾಗಿದೆ. ಬಾರ್ಕೂರು ಹಾಗೂ ಕುಂದಾಪುರದಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ನಿಮಾರ್ಣಕ್ಕೆ ತಲಾ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 59 ಸಾವಿರ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಗಳನ್ನು ಖರೀದಿಸಲು 1 .72 ಕೋಟಿ ರೂ. ಹಾಗೂ ಅತಿಥಿ ಶಿಕ್ಷಕರಿಗೆ ವೇತನಕ್ಕೆ 2 ಕೋಟಿ ರೂ. ಹಾಗೂ ವಿವೇಕ ಶಾಲಾ ಕಟ್ಟಡಗಳ ನಿಮಾರ್ಣ ಕಾಮಗಾರಿಗೆ ಈವರೆಗೆ 18.48 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ಯಶ್ಪಾಲ್ ಎ. ಸುವರ್ಣ, ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಎಸ್ಪಿ ಡಾ. ಅರುಣ್ ಕೆ., ಜಿಪಂ ಸಿಇಒ ಪ್ರತಿಕ್ ಬಾಯಲ್, ಎಎಸ್ಪಿ ಸಿದ್ದಲಿಂಗಪ್ಪ, ಎಡಿಸಿ ಮಮತಾದೇವಿ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ 20 ಮಂದಿ ಕೃಷಿಕರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಸಾಧಾರಣ ಸಾಧನೆ ಮಾಡಿದ 7 ವಿದ್ಯಾರ್ಥಿಗಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಲಾಯಿತು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 4 ಮಂದಿ ಬಾಲವಿಜ್ಞಾನಿಗಳನ್ನು ಗೌರವಿಸಲಾಯಿತು. ಆಯುಷ್ಮಾನ್ ಭಾರತ್ ಯೋಜನೆಯಡಿ ಜಿಲ್ಲೆಯಲ್ಲಿ ಲಾನುಭವಿಗಳಿಗೆ ಅತ್ಯುತ್ತಮ ಸೇವೆ ಸಲ್ಲಿಸಿದ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಸೇರಿ 5 ಆಸ್ಪತ್ರೆಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 5 ಮಂದಿ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಪಣಿಯಾಡಿ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ, ಮುಕುಂದ ಕೃಪ ಶಾಲೆ, ವಳಕಾಡು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮ ನಡೆಯಿತು. 21 ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.