

ಮಂಡ್ಯ: ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ನಾಲೆ 2ನೇ ಹಂತದ ಆಧುನೀಕರಣ ಪ್ಯಾಕೇಜ್-1ರ ಕಾಮಗಾರಿಯನ್ನು 360 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮುಖ್ಯ ನಾಲೆಯ ಸರಪಳಿಯಿಂದ 46.25 ಕಿ.ಮೀ ವರೆಗೆ ನಾಲೆಯನ್ನು ಆಧುನೀಕರಣಗೊಳಿಸಲಾಗುವುದು. ಕೆಮ್ಮಣ್ಣುನಾಲೆ, ತುರುಗನೂರು ನಾಲೆ, ಹೆಬ್ಬಕವಾಡಿ ಮತ್ತು ಸಂಪರ್ಕ ನಾಲೆಗಳು ಆಧುನೀಕರಣ ಕಾಮಗಾರಿಗೆ 375 ಕೋಟಿ ರೂ ಮಂಜೂರಾಗಿದೆ ಎಂದು ವಿವರಿಸಿದರು.
ಜಿಲ್ಲೆಯ ವ್ಯಾಪ್ತಿಯ ನಾಲೆ, ಕೆರೆ ಮತ್ತು ರಸ್ತೆಗಳ ಬದಿಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳ ತಡೆಗಾಗಿ ಏಳು ತಾಲೂಕುಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ಪರಿಶೀಲನೆ ನಡೆಸಿ 141.12 ಕೋಟಿ ರೂ ಮೊತ್ತಕ್ಕೆ ಕ್ರ್ಯಾಶ್ ಬ್ಯಾರಿಯರ್ ಅಳವಡಿಸಲು ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಇದಕ್ಕೂ ಸರ್ಕಾರದಿಂದ ಅನುಮೋದನೆ ಪಡೆದು, ಕ್ರ್ಯಾಶ್ ಬ್ಯಾರಿಯರ್ ಅಳವಡಿಸಲಾಗುವುದು ಎಂದರು.
ನಮ್ಮ ನಡಿಗೆ ಪರಂಪರೆಯ ಕಡೆಗೆ ಘೋಷಣೆಯೊಂದಿಗೆ ಜಿಲ್ಲೆಯಲ್ಲಿ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳ ರಕ್ಷಣೆಗೆ ಕ್ರಮ ವಹಿಸಲಾಗಿದೆ. ಹಾಗೆಯೇ ಪ್ರವಾಸೋದ್ಯವನ್ನು ಉತ್ತೇಜಿಸಲು ಜಿಲ್ಲೆಯಿಂದ ಪ್ರತ್ಯೇಕವಾದ ಅಂತರ್ಜಾಲ ರಚನೆಗೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 151 ಸ್ಮಾರಕಗಳನ್ನು ಸಂರಕ್ಷಿಸಲಾಗಿದೆ. ಉಳಿದ ಸ್ಮಾರಕಗಳ ಸಂರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಇದರೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಮೊಬೈಲ್ ಆ್ಯಪ್, ಪ್ರವಾಸಿ ನಕ್ಷೆ, ಪ್ರವಾಸಿ ಕಿರುಹೊತ್ತಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿಶೇಷವಾಗಿ ಮಂಡ್ಯ ತಾಲೂಕು ಹೊಸಬೂದನೂರು ಗ್ರಾಮದಲ್ಲಿ 13ನೇ ಶತಮಾನದ ಕಾಶಿವಿಶ್ವನಾಥಸ್ವಾಮಿ ಮತ್ತು ಅನಂತ ಪದ್ಮನಾಭ ದೇವಾಲಯಗಳಿವೆ. ಹೊಯ್ಸಳರ ಕಾಲ ಈ ದೇವಾಲಯಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಿಸಿಕೊಂಡು ಅಭಿವೃದ್ಧಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಮಾ.2 ಮತ್ತು 3ರಂದು ಬೂದನೂರು ಉತ್ಸವ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಪ್ರತಿಷ್ಠಾನ ರಚನೆ, ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಹಾಗೂ ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ನವೀಕರಣಕ್ಕೆ ಕ್ರಮ ವಹಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ಒಂದೇ ಬಾರಿಗೆ 8 ರೈತ ಸಂಪರ್ಕ ಕೇಂದ್ರಕ್ಕೆ ನಿವೇಶನಗಳನ್ನು ಗುರುತಿಸಿ, ಒಂದೇ ಸೂರಿನಡಿ ಕೃಷಿ ಮತ್ತು ಕೃಷಿ ಸಂಬಂಧಿತ ಎಲ್ಲ ಇಲಾಖೆಗಳ ಯೋಜನೆ ಹಾಗೂ ತಾಂತ್ರಿಕೆಗಳ ಮಾಹಿತಿ ಒಳಗೊಂಡ ಸುಸಜ್ಜಿತ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ತಲಾ 2 ಕೋಟಿ ರೂಗಳಂತೆ 16 ಕೋಟಿ ರೂ ಮಂಜೂರಾಗಿದ್ದು, 5 ರೈತ ಸಂಪರ್ಕ ಕೇಂದ್ರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಸೀತಾಲಕ್ಷ್ಮೀ, ಆಹಾರ ಇಲಾಖೆ ಜಂಟಿ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ್, ನಗರಸಭೆ ಸದಸ್ಯರಾದ ಪೂರ್ಣಿಮಾ, ನಹೀಂ, ಗೀತಾ, ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್ ಇತರರಿದ್ದರು.