

ರಾಯಚೂರು: ದೇಶಕ್ಕೆ ಸಂವಿಧಾನ ಸಮರ್ಪಣೆ ಹಾಗೂ ಗಣರಾಜ್ಯೋತ್ಸವ ದಿನವಾದ ಜ.26 ದೇಶದ ಜನರಿಗೆ ನಿಜವಾದ ಸಮಾನತೆ ಸಿಕ್ಕ ದಿನವಾಗಿದ್ದು, ಸಂವಿಧಾನದ ಮೂಲಕ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳ ನೀಡುವ ಮೂಲಕ ಭದ್ರ ಬುನಾದಿ ಹಾಕಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಶುಕ್ರವಾರ ಮಾತನಾಡಿ, ವಿವಿಧ ಭಾಷೆ, ಸಂಸ್ಕೃತಿಯ ದೇಶಕ್ಕೆ ವಿಶ್ವವೇ ಬೆರಗಾಗುವಂತಹ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ ಎಂದರು.
371ಜೆ ಮೀಸಲಾತಿಯಿಂದ ಪ್ರತಿವರ್ಷ ಕಲ್ಯಾಣ ಕರ್ನಾಟಕ ಭಾಗಕ್ಕೆ 900 ವೈದ್ಯಕೀಯ ಹಾಗೂ ಸಾವಿರಾರು ಇಂಜಿನಿಯರಿಂಗ್ ಸೀಟು ಸಿಗುವಂತಾಗಿದೆ. ಸರ್ಕಾರ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಈ ಭಾಗದಲ್ಲಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವಂತೆ ಈಗಾಗಲೇ ರಾಜ್ಯದ ನಿಯೋಗ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದೆ. ಶೀಘ್ರದಲ್ಲಿ ಮತ್ತೊಮ್ಮೆ ನಿಯೋಗ ತೆರಳಿ ಒತ್ತಾಯಿಸಲಾಗುವುದು. ವಿಮಾನ ನಿಲ್ದಾಣಕ್ಕೆ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲಾಗುತ್ತಿದ್ದು, ನವಲಿ ಹತ್ತಿರ ಸಮತೋಲನ ಜಲಾಶಯ ನಿರ್ಮಾಣಕ್ಕೆ ಪ್ರಯತ್ನಗಳು ನಡೆಸಲಾಗುತ್ತಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಯಶಸ್ವಿಗೆ ಶ್ರಮಿಸಿದ ವೈದ್ಯರಿಗೆ ಸನ್ಮಾನಿಸಿ, ಗೌರವಿಸಲಾಯಿತು. ವಿವಿಧ ತಂಡಗಳಿಂದ ಪಥ ಸಂಚಲನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಉಪಾಧ್ಯಕ್ಷ ಬಷೀರ್ ಅಹ್ಮದ್, ಮುಖಂಡರಾದ ಎ.ವಸಂತಕುಮಾರ, ಕೆ.ಶಾಂತಪ್ಪ, ಮಹ್ಮದ್ ಶಾಲಂ, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಉಪಸ್ಥಿತರಿದ್ದರು.