

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ 73ನೇ ಗಣರಾಜ್ಯೋತ್ಸವವನ್ನು ಕರೊನಾ ಮಾರ್ಗಸೂಚಿ ನಿಯಮ ಪಾಲನೆಯೊಂದಿಗೆ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ವಾಹನದಲ್ಲಿ ತೆರಳಿ ಪಥ ಸಂಚಲನ ತಂಡಗಳ ಗೌರವ ವಂದನೆ ಸ್ವೀಕರಿಸಿದರು.
ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್‌ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರೀಕ ಪೊಲೀಸ್ ಪಡೆ, ಗೃಹರಕ್ಷಕ ದಳ, ಮಹಿಳಾ ಪೊಲೀಸ್ ಪಡೆ, ಅರಣ್ಯ ಇಲಾಖೆ ತಂಡ ಪಥಸಂಚಲನ ನಡೆಸಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿತು.
ಕರೊನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಶಾಲಾ ವಿದ್ಯಾರ್ಥಿಗಳ ಪಥಸಂಚಲನ, ಆಕರ್ಷಕ ನೃತ್ಯ ಕಾರ್ಯಕ್ರಮಕ್ಕೆ ಅವಕಾಶ ನೀಡಿರಲಿಲ್ಲ.
ಚಿನ್ನದ ಪದಕ ವಿಜೇತರಿಗೆ ಸನ್ಮಾನ: ಉತ್ತಮ ಕಾರ್ಯ ನಿರ್ವಹಣೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ರಾಜ್ಯ ರಸ್ತೆ ನಿಗಮದ ಚಾಲಕರಾದ ಕೆ.ಎನ್.ಶ್ರೀನಿವಾಸಚಾರಿ, ಎಂ.ಅಬೀಬ್ ಪಾಷಾ, ಡಿ.ಎಂ.ನಾರಾಯಣಸ್ವಾಮಿ (ಚಿಂತಾಮಣಿ ಘಟಕ), ಅಬ್ದುಲ್ ಅಫಿಜುಲ್ಲಾ ಖಾನ್, ಎಚ್.ವಿ.ಪಟಾಲಪ್ಪ, ಆಂಜಿನಪ್ಪ (ದೊಡ್ಡಬಳ್ಳಾಪುರ), ಅಶ್ವತ್ಥನಾರಾಯಣಪ್ಪ, ಸಿ.ನಾರಾಯಣಸ್ವಾಮಿ (ಚಿಕ್ಕಬಳ್ಳಾಪುರ), ನಿಸ್ಸಾರ್ ಅಹಮದ್, ಜಿ.ಎಲ್.ಶ್ರೀನಿವಾಸ, ಪಿ.ಆರ್.ವೆಂಕಟರೆಡ್ಡಿಯನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಮತ್ತಿತರರು ಇದ್ದರು.
ಸೀಮಿತ ಸಂಖ್ಯೆಯ ಸಭಿಕರು: ಬೆಳಗ್ಗೆ ಜಿಲ್ಲಾದ್ಯಂತ ದಟ್ಟವಾಗಿ ಮಂಜು ಹರಡಿಕೊಂಡಿತ್ತು. ಇದರ ನಡುವೆ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಬಿಸಿಲು ಹೆಚ್ಚಾಯಿತು. ಮತ್ತೊಂದೆಡೆ ಕರೊನಾ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯ ಸಭಿಕರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಬಹುತೇಕ ಆಸನಗಳು ಖಾಲಿ ಇದ್ದವು.
ಕೊಸರಿದ ಸಚಿವ:ಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರಧ್ವಜ ಬಿಗಿಯಾಗಿ ಕಟ್ಟಿದ್ದ ಹಿನ್ನೆಲೆಯಲ್ಲಿ ಹಾರಲಿಲ್ಲ. ಜೋರಾಗಿ ಹಲವು ಬಾರಿ ಜಗ್ಗಬೇಕಾಯಿತು. ಕೊನೆಗೆ ಗಟ್ಟಿಯಾಗಿ ಎಳೆದ ತಕ್ಷಣ ಧ್ವಜ ಸಡಿಲಗೊಂಡು ಹಾರಾಡಿತು.
ಮಹನೀಯರಿಗೆ ಮಾದರಿಯಾಗಿ ಬದುಕಿ: ಚಿಕ್ಕಬಳ್ಳಾಪುರ: ದೇಶದ ಮಹನೀಯರಿಗೆ ಮಾದರಿಯಾಗಿ ಬದುಕಬೇಕು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಸಣ್ಣ ಉದ್ದಿಮೆಗಳ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜು ಕರೆ ನೀಡಿದರು.
ಗಣರಾಜ್ಯೋತ್ಸವದಲ್ಲಿ ಧ್ವಜಾರೊಹಣವನ್ನು ನೆರವೇರಿಸಿ ಮಾತನಾಡಿ, ತಾಯ್ನಡಿನ ಸ್ವಾತಂತ್ರ್ಯಕ್ಕಾಗಿ ಜೀವನವನ್ನು ಸಮರ್ಪಿಸಿದ ದೇಶ ಪ್ರೇಮಿಗಳ ತ್ಯಾಗ ಬಲಿದಾನಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು. ಜಿಲ್ಲೆಯಲ್ಲಿ ಅಮೃತ ಗ್ರಾಮೀಣ ವಸತಿ ಯೋಜನೆಯಡಿ 17 ಗ್ರಾಪಂಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. 2021-22ನೇ ಸಾಲಿಗೆ 5,760 ಹೊಸ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಜಿಲ್ಲೆಯನ್ನು ಕೈಗಾರಿಕಾ ಹಬ್ ಆಗಿ ಪರಿವರ್ತಿಸಲು ಸರ್ಕಾರವು ಒಲವು ತೋರಿದೆ. ಇದಕ್ಕೆ ರಾಜ್ಯ ಉನ್ನತ ಮಟ್ಟದ ಸಮಿತಿಯು 43 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 4,521 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷೆ ಹೊಂದಲಾಗಿದೆ. ಇದರಿಂದ 10,967 ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದರು. ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳ ನಗರೋತ್ಥಾನ-4 ಯೋಜನೆಯಡಿ ಮುಂದಿನ 3 ವರ್ಷಗಳ ಅವಧಿಯಲ್ಲಿ 3,885 ಕೋಟಿ ರೂ. ಅಭಿವೃದ್ಧಿ ಕೆಲಸ ಕೈಗೊಳ್ಳಲು ಮುಂದಾಗಿದೆ ಎಂದರು. ಎಚ್.ಎನ್.ವ್ಯಾಲಿ ಯೋಜನೆ ಮತ್ತು ಪ್ರಸಕ್ತ ಸಾಲಿನ ಧಾರಾಕಾರ ಮಳೆಯಿಂದ ಜಿಲ್ಲೆಯ 44 ಕೆರೆಗಳ ಪೈಕಿ 43 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ವೈದ್ಯಕೀಯ ಶಿಕ್ಷಣ ಕಾಲೇಜು ಹಾಗೂ 700 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ತ್ವರಿತವಾಗಿ ಸ್ಥಾಪನೆಯಾಗಿ, ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂದರು. ಸಂವಿಧಾನವು ಸರ್ವರಿಗೆ ಸಮಪಾಲು, ಸರ್ವರಿಗೆ ಸಮ ಬಾಳು ಎಂಬ ಆದರ್ಶ ತತ್ವದೊಂದಿಗೆ ಜಾರಿಯಾಗಿದೆ. ಇದರ ಮಹತ್ವವನ್ನು ಅರಿತು ನಡೆದುಕೊಂಡಾಗ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದರು.