

ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದರು.
ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನ ವಿವಿಧ ಧರ್ಮ, ಬಣ್ಣ, ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ವೈವಿಧ್ಯತೆಯ ನಡುವೆ ದೇಶದ ಏಕತೆ ಸಾರುವಲ್ಲಿ ಮಾದರಿ ಎನಿಸಿಕೊಂಡಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರೂಪಿಸಿ ಸಾರ್ವಕಾಲಿಕ ಮಾರ್ಗದರ್ಶಕ ಎನಿಸಿದ್ದಾರೆ. ರಚನಾ ಸಮಿತಿ ಸದಸ್ಯರಾಗಿದ್ದ ನಮ್ಮ ರಾಜ್ಯದ ಬೆನಗಲ್ ನರಸಿಂಹರಾವ್ ಅವರೂ ಉತ್ತಮ ಅಂಶಗಳನ್ನು ಸಂವಿಧಾನಕ್ಕೆ ಸೇರ್ಪಡೆಗೊಳಿಸಿದ್ದಾರೆ ಎಂದು ಸ್ಮರಿಸಿದರು.
ತುಮಕೂರಿನಲ್ಲಿ 100 ಹಾಸಿಗೆ ಸೌಲಭ್ಯದ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ, 20 ಕೋಟಿ ರೂ. ವೆಚ್ಚದಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಹಾಗೂ 50 ಲಕ್ಷ ರೂ. ವೆಚ್ಚದಲ್ಲಿ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿರುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಕರೊನಾ ಲಸಿಕೆಯ ಮೊದಲನೇ ಡೋಸ್‌ನಲ್ಲಿ ಶೇ.100 ಗುರಿಸಾಧನೆ ಆಗಿದೆ. ಶೇ.85 ಜನ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 15ರಿಂದ 18 ವರ್ಷದೊಳಗಿನ 80 ಸಾವಿರ ಮಕ್ಕಳಿಗೆ ಲಸಿಕೆ ನೀಡಿ ಶೇ.65 ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.
ಶೇ.60 ಆರೋಗ್ಯ ಕಾರ್ಯಕರ್ತರು ಶೇ.52 ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗಿದ್ದರೂ ಶೇ.1 ರಿಂದ 3 ಸೋಂಕಿತರು ಆಸ್ಪತ್ರೆಗೆ ದಾಖಲಾಗಿರುವುದಾಗಿ ಮಾಹಿತಿ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಬಿ.ಜಿ. ಕೃಷ್ಣಪ್ಪ, ಶಾಸಕ ಆರ್. ರಾಜೇಂದ್ರ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಡಾ. ಕೆ. ವಿದ್ಯಾಕುಮಾರಿ, ಪೊಲೀಸ್ ಅಧೀಕ್ಷಕ ರಾಹುಲಕುಮಾರ್ ಮತ್ತಿತರರು ಇದ್ದರು.
ಕ್ರೀಡಾ ಸಾಧಕರಿಗೆ ಸನ್ಮಾನ:
ಗಣರಾಜ್ಯೋತ್ಸವದಲ್ಲಿ ಸಾಧಕ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಕಿರಣ್‌ನಂದನಾ, ಕೆ. ಪುಷ್ಕರ್, ರೋಹನ್ ಎನ್.ಗೌಡ (ರೈಫಲ್ ಶೂಟಿಂಗ್), ಎಸ್.ಆರ್. ಯಶಸ್, ವಿಜೇತ ಶೆಟ್ಟಿ, ಟಿ.ಎಂ. ಧ್ಯಾನ್ (ಪಿಸ್ತೂಲ್ ಶೂಟಿಂಗ್), ಟಿ.ಎ. ಅಭಿಷೇಕ್, ಜೆ. ಚಿರಂತ್, ಎಸ್. ಸಂಧ್ಯಾ (ಜಿಮ್ನಾಸ್ಟಿಕ್ಸ್), ಎಂ. ಕೃಷಿಕ್, ಟಿ.ಎ. ನರೇಶ್‌ಬಾಬು, ಚಿಕ್ಕತಿಮ್ಮಯ್ಯ (ಅಥ್ಲಟಿಕ್ಸ್), ಕೆ.ಎಂ. ಪ್ರಜ್ವಲ್ (ಖೋಖೋ), ಕೆ.ಆರ್. ನವೀನ್, ಜಿ.ಕೆ. ಭರತ್ (ವಾಲಿಬಾಲ್), ಎಂ.ಎಚ್. ಮಹೇಶ್, ಸಿ. ದೀಪಶ್ರೀ (ವೇಟ್‌ಲಿಫ್ಟಿಂಗ್), ಕರ್ನಾಟಕ 4ನೇ ಬೆಟಾಲಿಯನ್‌ನ ಎನ್‌ಸಿಸಿ ಕೆಡೆಟ್ ಸಂಜು ಅವರನ್ನು ಗೌರವಿಸಲಾಯಿತು.
‘ಜೆಸಿಎಂ’ಗೆ ಹೋಲಿಸಿದರೆ ‘ಆರಗ’ ಭಾಷಣ ಸಪ್ಪೆ!
ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರ ಗಣರಾಜ್ಯೋತ್ಸವ ಸಂದೇಶ ಸಪ್ಪೆ ಎನಿಸಿತು. ಅಧಿಕಾರಿಗಳು ಬರೆದುಕೊಟ್ಟಿದ್ದ ಸಿದ್ಧ ಭಾಷಣ ಓದಿ ಮುಗಿಸಿದರು. ವಿಷಯಗಳೆಲ್ಲ ಹಿಂದಿನ ಸಚಿವರ ಹಳೆಯ ಭಾಷಣದ ನಕಲು ಎಂಬಂತಿತ್ತು.
ಭಾಷಣವನ್ನು ಸಿದ್ಧಪಡಿಸಿಕೊಳ್ಳದೆ ಸಚಿವ ಜೆ.ಸಿ. ಮಾಧುಸ್ವಾಮಿ ವೇದಿಕೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಆರಗ ಜ್ಞಾನೇಂದ್ರ ಅವರ ಭಾಷಣವನ್ನು ಅದಕ್ಕೆ ಹೋಲಿಸಿದ ಸಾರ್ವಜನಿಕರು ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲೆಯವರೇ ಮಂತ್ರಿಯಾಗಿರಬೇಕು ಎಂದು ಮಾತನಾಡಿಕೊಂಡರು. ತುಮಕೂರಿನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ಕ್ರೀಡಾ ಸಾಧಕರನ್ನು ಸನ್ಮಾನಿಸಿದರು.