

ಮೈಸೂರು: ನಗರದ ವಿವಿಧೆಡೆ ಸಂಘ ಸಂಸ್ಥೆಗಳು ಹಾಗೂ ಶಾಲಾ, ಕಾಲೇಜುಗಳಲ್ಲಿ ಶುಕ್ರವಾರ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಂಸದ ಪ್ರತಾಪ್ ಸಿಂಹ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಯುವಶಕ್ತಿಯ ಪಾತ್ರ ಮಹತ್ವದಾಗಿದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಗಳನ್ನು ದೇಶದ ಅಮೂಲ್ಯ ಸಂಪತ್ತಾಗಿ ರೂಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ ಎಂದರು. ಪ್ರಾಂಶುಪಾಲ ಡಾ. ಬಿ ಸದಾಶಿವೇಗೌಡ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್ ಹಾಗೂ ಇತರರು ಇದ್ದರು.
ಬಂಡಿಪಾಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಜಿಲ್ಲಾ ಲೋಡರ್ಸ್ ಟ್ರಾನ್ಸ್‌ಪೋರ್ಟ್ ಮತ್ತು ಜನರಲ್ ವರ್ಕರ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಮಾತನಾಡಿ, ದೇಶ ಹಾಗೂ ರಾಜ್ಯದ ಅಭಿವೃದ್ಧಿಯಲ್ಲಿ ಲೋಡಿಂಗ್, ಅನ್‌ಲೋಡಿಂಗ್ ಕಾರ್ಮಿಕರ ಪಾತ್ರ ಮಹತ್ವದ್ದು. ಮಳೆ, ಬಿಸಿಲು, ಚಳಿಗೆ ಮೈಯೊಡ್ಡಿ, ದೇಹವನ್ನು ದಂಡಿಸಿ ದಿನ ಬಳಕೆಯ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸುತ್ತಿರುವ ಕಾರ್ಮಿಕರ ಕಾರ್ಯ ಶ್ಲಾಘನೀಯ. ಕೋವಿಡ್, ಲಾಕ್‌ಡೌನ್ ಸಂದರ್ಭದಲ್ಲಿ ಪಡಿತರ ಮತ್ತು ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ತಮ್ಮ ಸೇವೆಯನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎಂದರು.
ಈ ಸಂದರ್ಭ ಮೃತ ಕೂಲಿ ಕಾರ್ಮಿಕ ಸಿದ್ದರಾಜು ಪತ್ನಿಗೆ 50,000 ರೂ ಹಾಗೂ ನಿವೃತ್ತಿ ಹೊಂದುತ್ತಿರುವ 25 ಕೂಲಿ ಕಾರ್ಮಿಕರಿಗೆ 25000 ರೂ.ಚೆಕ್ ವಿತರಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಎಪಿಎಂಸಿ ಮಾಜಿ ಸದಸ್ಯ ಎನ್.ಪ್ರಕಾಶ, ಅಸೋಸಿಯೇಷನ್ ಅಧ್ಯಕ್ಷ ಎನ್.ಪುರುಷೋತ್ತಮ, ಉಪಾಧ್ಯಕ್ಷ ಮುನಾವರ್ ಪಾಷಾ, ಪ್ರಧಾನ ಕಾರ್ಯದರ್ಶಿ ಅಸೀಫ್ ಅಹಮ್ಮದ್ ಹಾಗೂ ಇತರರು ಇದ್ದರು.
ಸರ್ ಎಂ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತಿ ಹಾಗೂ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಯನಗರ ಮಹೇಶ, ಕಾರ್ಯದರ್ಶಿ ರವಿಕುಮಾರ್, ನಿರ್ದೇಶಕರಾದ ಚಂದ್ರೇಗೌಡ ಶಿವರಾಜ್, ಯೋಗೇಶ್, ಕುಮಾರ್, ಜಾಕಿರ್ ಹುಸೇನ್, ಸದಸ್ಯರಾದ ಮಹದೇವ್, ಕುಮಾರ್, ಮುನಿರತ್ನ, ಬಲರಾಮ್, ಗೋವಿಂದ ಇದ್ದರು.
ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಗಣರಾಜ್ಯೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರಮಾಣವಚನ ಸ್ವೀಕರಿಸಲಾಯಿತು. ಸಾಹಿತಿ ಟಿ.ಗುರುರಾಜ್, ವಿದ್ಯಾಸಂಸ್ಥೆ ಉಪಾಧ್ಯಕ್ಷ ಸ.ರ. ಸುದರ್ಶನ, ಸಂಸ್ಥೆಯ ಕಾರ್ಯದರ್ಶಿ ಸವಿತಾ ಪ. ಮಲ್ಲೇಶ್, ಖಜಾಂಚಿ ಎಚ್.ಟಿ. ಶೈಲಜಾ, ಪ್ರಾಂಶುಪಾಲರಾದ ಮಮತಾ , ಪ್ರಾಥಮಿಕ ಮುಖ್ಯ ಶಿಕ್ಷಕಿ ಶೀಲಾ, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸೌಮ್ಯಶ್ರೀ ಹಾಗೂ ಇತರರು ಇದ್ದರು.
ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗಣರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್ ಮಾತನಾಡಿ, ದೇಶವನ್ನು ಕಾಯುವ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಸೈನಿಕರು ಹಗಲು-ಇರುಳು ಎನ್ನದೇ ತಮ್ಮ ಜೀವವನ್ನು ಪಣವಾಗಿಟ್ಟು ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಇವರ ಸೇವೆಯನ್ನು ನಾವು ಎಂದಿಗೂ ಮರೆಯಬಾರದು ಎಂದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎನ್.ಚಂದ್ರಶೇಖರ್, ಹಿರಿಯ ಸದಸ್ಯರಾದ ಎಸ್.ಎಲ್.ರಾಮಚಂದ್ರ, ಆರ್.ನರಸಿಂಹ, ಆರ್.ಎಸ್.ಮೋಹನ್ ಮೂರ್ತಿ, ಎಸ್.ಅಚ್ಯುತ ಹಾಗೂ ಇತರರು ಇದ್ದರು.