

ಕೋಲಾರ: ಗಣತಂತ್ರ ಸುಭದ್ರವಾಗಿಸಲು ಗಡಿ ಕಾಯುವ ಯೋಧರ ತ್ಯಾಗ ಬಲಿದಾನ ಗೌರವಿಸುವ ಜತೆಗೆ ಅವರ ಧೈರ್ಯ, ಅನ್ನದಾತರ ಸಂಯಮ ನಮಗೆ ಆದರ್ಶವಾಗಬೇಕು ಎಂದು ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ ಪ್ರಗತಿಪಥದಲ್ಲಿ ಸಾಗಲು ಸರ್ವತೋಮುಖ ಅಭಿವೃದ್ಧಿ ಅಗತ್ಯ. ಆರ್ಥಿಕ ಸಬಲತೆ, ಸಾಮಾಜಿಕ ಕಳಕಳಿ, ಸಮೃದ್ಧ ಸಂಪನ್ಮೂಲದ ಜತೆಗೆ ಆರೋಗ್ಯಕರ ಸಮಾಜವೂ ಮುಖ್ಯ ಎಂದರು. ದೇಶವನ್ನು ಪ್ರಜಾಪ್ರಭುತ್ವದ ಚೌಕಟ್ಟಿನ ಒಳಗೆ ತರಲು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ನೀಡಿದ್ದು ಪ್ರಜಾಸತ್ತಾತ್ಮಕ, ಸಮಾಜವಾದಿ, ಸಾರ್ವಭೌಮ ಗಣರಾಜ್ಯವಾಗಿ ಹೊರಹೊಮ್ಮಿದೆ. ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸ್ನೇಹ, ಭ್ರಾತೃತ್ವ ಹಾಗೂ ಮಾನವ ಮೌಲ್ಯಗಳೊಂದಿಗೆ ಉತ್ತಮ ಸಮಾಜ ಕಟ್ಟೋಣ ಎಂದರು.
ಇದಕ್ಕೂ ಮುನ್ನ ತೆರೆದ ಜೀಪಿನಲ್ಲಿ ಸಚಿವರು ಪರೇಡ್ ವೀಕ್ಷಿಸಿದರು. ಪೊಲೀಸ್, ಡಿಎಆರ್, ಗೃಹರಕ್ಷಕದಳ, ಮಹಿಳಾ ಪೊಲೀಸ್ ವಿಭಾಗದಿಂದ ಒಟ್ಟು 6 ತುಕಡಿಗಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟವು. ಪೊಲೀಸ್ ವಾದ್ಯವೃಂದ ಸಾಥ್ ನೀಡಿತು. ರೈತ ಗೀತೆ, ದೇಶಭಕ್ತಿಗೀತೆಗಳನ್ನು ಹಾಡಲಾಯಿತು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಾರಂಜಿಕಟ್ಟೆಯ ದ್ರೌಪತಾಂಬಾ ಕನ್ನಡಿಗರ ಯುವಕ ಸಂಘ, ಯಂಗ್ ಇಂಡಿಯಾ ಡೆವಲಪ್‌ಮೆಂಟ್ ಸೊಸೈಟಿ ತಂಡಕ್ಕೆ ಕ್ರೀಡಾ ಕಿಟ್, ಖೋಖೋ ಆಟಗಾರರಿಗೆ ಸಮವಸ್ತ್ರ ವಿತರಿಸಲಾಯಿತು.
ಆಯುಷ್ಮಾನ್ ಭಾರತ್ ಯೋಜನೆಯಡಿ ಉತ್ತಮ ಆರೋಗ್ಯ ಸೇವೆಗೆ ಕೇಂದ್ರ ಸರ್ಕಾರ ಗುರುತಿಸಿದ ಜಿಲ್ಲೆಯ 4 ಆಸ್ಪತ್ರೆಗಳಲ್ಲಿ ಎಸ್ಸೆನ್ನಾರ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ಮಾಲೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಸಂತಕುಮಾರ್, ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಡಾ.ಹಾಜೀಂ ಹಾಗೂ ಜಾಲಪ್ಪ ನಾರಾಯಣ ಹೃದಯಾಲಯದ ವ್ಯವಸ್ಥಾಪಕ ಡಾ.ಶಶಿಧರ್ ಪ್ರಸಂಶನಾ ಪತ್ರ ಸ್ವೀಕರಿಸಿದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಕೆ.ಶ್ರೀನಿವಾಸಗೌಡ, ವೈ.ಎ.ನಾರಾಯಣಸ್ವಾಮಿ, ಇಂಚರ ಗೋವಿಂದರಾಜು, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ, ಡಿಸಿ ಸಿ.ಸತ್ಯಭಾಮ, ಎಸ್ಪಿ ಕಾರ್ತಿಕ್‌ರೆಡ್ಡಿ, ಸಿಇಒ ಎನ್.ಎಂ.ನಾಗರಾಜ್, ಎಡಿಸಿ ಡಾ.ಸ್ನೇಹಾ ವಿ.ಸಿ, ತಹಸೀಲ್ದಾರ್ ಶೋಭಿತಾ, ಪೌರಾಯುಕ್ತ ಶ್ರೀಕಾಂತ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಡಿಡಿಪಿಐ ಕೃಷ್ಣಮೂರ್ತಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ನೀರು ಹರಿಸುವ ಪ್ರಯತ್ನ: ಜಿಲ್ಲೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅಂತರ್ಜಲಮಟ್ಟ ಹೆಚ್ಚಿಸಲು ಕೆಸಿ ವ್ಯಾಲಿ ಮೊದಲ ಹಂತ ಪ್ರಗತಿಯಲ್ಲಿದೆ. ಎರಡನೇ ಹಂತಕ್ಕೂ ಸರ್ಕಾರ ಅನುಮೋದನೆ ನೀಡಿದೆ. ಸಚಿವ ಜಾರಕಿಹೊಳಿ ಜತೆ ಸಕಲೇಶಪುರಕ್ಕೆ ಭೇಟಿ ನೀಡಿ ಎತ್ತಿನಹೊಳೆ ಕಾಮಗಾರಿ ಪರಿಶೀಲಿಸಿದ್ದೇನೆ. ತ್ವರಿತಗತಿಯಲ್ಲಿ ಕೆಲಸ ಮುಗಿಸಿ ಜಿಲ್ಲೆಗೆ ನೀರು ಹರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು.
ಅಭಿವೃದ್ಧಿಗೆ ವೇಗ: ರಾಜ್ಯದ ಇತರ ಜಿಲ್ಲೆಗಳಿಗಿಂತ ಕೋಲಾರ ಜಿಲ್ಲಾಡಳಿತ ಉತ್ತಮವಾಗಿ ಕರೊನಾ ನಿರ್ವಹಣೆ ಮಾಡಿದೆ ಎಂದು ಶ್ಲಾಘಿಸಿದ ಸಚಿವರು, ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿಯಾಗಿದೆ. ಇನ್ನಷ್ಟು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಪ್ರಯತ್ನಿಸುತ್ತಿದೆ. ಕರೊನಾದಿಂದ ಪ್ರಗತಿ ನಿಧಾನವಾಗಿತ್ತು. ಈಗ ಕರೊನಾದಿಂದ ಹೊರಬಂದಿದ್ದು, ಅಭಿವೃದ್ಧಿಯ ವೇಗ ಹೆಚ್ಚಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಖಾತೆ ಗೊಂದಲ: ಕಾರ್ಯಕ್ರಮ ನಿರೂಪಕರಿಗೆ ಸಚಿವ ಸಿ.ಪಿ.ಯೋಗೇಶ್ವರ್ ಖಾತೆಯದ್ದೇ ಗೊಂದಲ. ಆಹ್ವಾನ ಪತ್ರಿಕೆಯಲ್ಲಿದ್ದಂತೆ ಸಣ್ಣನೀರಾವರಿ ಸಚಿವರೆಂದು ಸಂಬೋಧಿಸಿದ್ದಕ್ಕೆ ಭಾಷಣದಲ್ಲಿ ಸ್ಪಷ್ಟನೆ ನೀಡಿದ ಸಚಿವರು ತಮಗೆ ಪ್ರವಾಸೋದ್ಯಮ, ಪರಿಸರ ಖಾತೆ ಹಂಚಿಕೆಯಾಗಿದೆ ಎಂದರು.
ಗಾಂಧಿ ಟೋಪಿ: ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸುವ ಪ್ರಥಮ ಅವಕಾಶ ಪಡೆದ ಯೋಗೇಶ್ವರ್ ಗಾಂಧಿ ಟೋಪಿ, ಕರಿಕೋಟು, ಹೆಗಲಿಗೆ ಕೇಸರಿ ಶಾಲು ಹಾಕಿಕೊಂಡು ಮಿಂಚಿದರು.