ನಗರದಲ್ಲಿ ಗಣರಾಜ್ಯೋತ್ಸವ ಸಂಭ್ರಮ

DSC_4553
Published on

ಮೈಸೂರು: ಆಕರ್ಷಕ ಪಥಸಂಚಲನ, ಶಾಲಾ ಮಕ್ಕಳ ನೃತ್ಯ ವೈಭವ, ಬೆರಗುಗೊಳಿಸಿದ ಪೊಲೀಸ್ ಡಾಗ್ ಸ್ಕ್ವಾಡ್ ತಂಡ ಚಮತ್ಕಾರ ಪ್ರದರ್ಶನ, ಒಟ್ಟಾರೆ ಸಂವಿಧಾನದ ಗುಣಗಾನ, ದೇಶಭಕ್ತಿಯ ಜೈಕಾರ..!

ಜಿಲ್ಲಾಡಳಿತದಿಂದ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕಂಡುಬಂದ ಮನಮೋಹಕ ದೃಶ್ಯಗಳಿವು.

ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ವಾಹನದಲ್ಲಿ ಸಾಗಿದ ಅವರು, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ತದನಂತರ ನಡೆದ 24 ತುಕಡಿಗಳ ಪಥಸಂಚಲನ ಕಣ್ಮನ ಸೆಳೆಯಿತು.

ಅಶ್ವಾರೋಹಿದಳ, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್, ಕೃಷ್ಣರಾಜ, ದೇವರಾಜ, ನರಸಿಂಹರಾಜ ವಿಭಾಗ, ನಗರ ಸಂಚಾರ ವಿಭಾಗ, ಮಹಿಳಾ ಪೊಲೀಸ್ ಪಡೆ, ಗೃಹರಕ್ಷಕ ದಳ, ಕೆಎಸ್‌ಆರ್‌ಪಿ, ಅಬಕಾರಿ, ಅರಣ್ಯ ಇಲಾಖೆಯ ಮಹಿಳಾ ಮತ್ತು ಪುರುಷರ ಪಡೆ, ಅಗ್ನಿಶಾಮಕ ದಳ, ಎನ್‌ಸಿಸಿ (ಆರ್ಮಿ), ಎನ್‌ಸಿಸಿ (ನೇವಿ), ಎನ್‌ಸಿಸಿ (ಏರ್‌ಫೋರ್ಸ್), ಪೊಲೀಸ್ ಪಬ್ಲಿಕ್ ಶಾಲೆ, ನವೋದಯ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡ, ಭಾರತ ಸೇವಾದಳ ಬಾಲಕ ಮತ್ತು ಬಾಲಕಿಯರ ತಂಡಗಳು ಪರೇಡ್‌ನಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದವು. ಕೊನೆಯಲ್ಲಿ ಪೊಲೀಸ್ ಬ್ಯಾಂಡ್‌ನ ನಿನಾದದೊಂದಿಗೆ ಪಥಸಂಚಲನಕ್ಕೆ ತೆರೆಬಿತ್ತು.

ಬೆರಗುಗೊಳಿಸಿದ ಚಮತ್ಕಾರ ಪ್ರದರ್ಶನ!: ಈ ಬಾರಿ ವಿಶೇಷವಾಗಿ ಆಯೋಜಿಸಿದ್ದ ಪೊಲೀಸ್ ಡಾಗ್ ಸ್ಕ್ವಾಡ್ ತಂಡದ ಚಮತ್ಕಾರ ಪ್ರದರ್ಶನ ಬೆರಗು ಮೂಡಿಸಿತು. ಎಆರ್‌ಎಸ್‌ಐ ಎಚ್.ಸಿ.ಹರೀಶ್ ನೇತೃತ್ವದಲ್ಲಿ ಸಿದ್ದೇಶ್, ಮಂಜುನಾಥ್, ಸತೀಶ್ ಇತರರ ಶ್ವಾನಗಳಿಂದ ಪ್ರಾತ್ಯಕ್ಷಿಕೆ ಪ್ರದರ್ಶನ ನೀಡಿದರು. ಲೈಕಾ, ಲಕ್ಕಿ, ಬ್ರೂನೋ, ಹಿಂದು ಎಂಬ ಶ್ವಾನಗಳು ಮೊದಲಿಗೆ ನಮಸ್ಕರಿಸಿ, ಪೆರೇಡ್ ಮಾಡಿ, ನಂತರ ಹಲವು ಬಗೆಯ ಪ್ರದರ್ಶಗಳನ್ನು ನೀಡಿದವು.

ಬಳಿಕ ಕುವೆಂಪುನಗರದ ಪ್ರಮತಿ ಹಿಲ್ ವ್ಯೆವ್ ಅಕಾಡೆಮಿಯ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ‘ಕದಂ ಸೆ ಕದಂ ಮಿಲಾಕೆ ಚಲೊ’ ಎಂಬ ಹಾಡಿಗೆ ನಾನಾ ಆಕೃತಿಯ ಪಿರಮಿಡ್ ಪ್ರದರ್ಶಿಸುವ ಜತೆಗೆ ನೃತ್ಯ ಮಾಡಿದರು. ಮರಿಮಲ್ಲಪ್ಪ ಪ್ರೌಢಶಾಲೆಯ 400 ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ಸೊಗಸಾಗಿ ನೃತ್ಯ ಮಾಡುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾರಿದರು. ಆರ್‌ಸಿಐಎಸ್ 350 ವಿದ್ಯಾರ್ಥಿಗಳು ನೃತ್ಯ ಗಮನ ಸೆಳೆದರು.

ಶಾಸಕರಾದ ಮರಿತಿಬ್ಬೇಗೌಡ, ಎಲ್.ನಾಗೇಂದ್ರ, ಮೇಯರ್ ತಸ್ನಿಂ, ಉಪಮೇಯರ್ ಸಿ.ಶ್ರೀಧರ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಇತರರಿದ್ದರು. ಇದೇ ವೇಳೆ ಜಿಲ್ಲಾ ಪೊಲೀಸರು ಜಾರಿಗೊಳಿಸಿರುವ ‘ಸುಭಾಹು’ ಇ-ಬೀಟ್ ಮಾಹಿತಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.

‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪ್ರದಾನ: ಪ್ರತಿ ವರ್ಷ ಜಿಲ್ಲಾ ಸರ್ಕಾರಿ ನೌಕರರಿಗೆ ನೀಡುವ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಯನ್ನು ಇದೇ ವೇಳೆ ಕೆ.ಆರ್.ಆಸ್ಪತ್ರೆಯ ಸರ್ಜನ್ ಡಾ.ಬಿ.ಎಂ. ಶಶಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಕೃಷ್ಣಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಗ್ರೂಪ್ ಬಿ ನೌಕರ ರಮೇಶ್ ಕುರಹಟ್ಟಿ, ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕ ಕೆ.ಅಶ್ವತ್ಥ್, ಜಿಲ್ಲಾಧಿಕಾರಿಗಳ ಎಫ್‌ಡಿಎಎಸ್ ಶ್ರೀನಿವಾಸ್, ನಂಜನಗೂಡು ಹುಳಿಮಾವು ಗ್ರಾಮ ಪಂಚಾಯತಿಯ ಪಿಡಿಒ ಬಿ.ಎನ್.ನಳಿನ, ಎಚ್.ಡಿ.ಕೋಟೆ ಡಿ.ಬಿ.ಕುಪ್ಪೆ ವೃತ್ತ ಗ್ರಾಮ ಲೆಕ್ಕಿಗ ಗೌಸ್ ಮೋದಿನ್, ಎಚ್.ಡಿ.ಕೋಟೆಯ ಪಿಆರ್‌ಇಡಿ ಉಪವಿಭಾಗದ ಕಿರಿಯ ಇಂಜಿನಿಯರ್ ಎಸ್.ಲಿಂಗರಾಜು, ಎಚ್.ಡಿ.ಕೋಟೆಯ ಪಿಡಬ್ಲೂೃಡಿ ಕಿರಿಯ ಇಂಜಿನಿಯರ್ ಧ್ರುವರಾಜ್ ಅವರಿಗೆ ಪ್ರದಾನ ಮಾಡಲಾಯಿತು.

ಪಥಸಂಚಲನದ ವಿಜೇತರು: ಆಕರ್ಷಕ ಪಥಸಂಚಲನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಶಸ್ತ್ರ ವಿಭಾಗದಲ್ಲಿ ಕೆಪಿಎಯ ಸೋಮಪ್ಪ ಗೌಡ (ಪ್ರಥಮ), ಡಿಎಆರ್‌ನ ಎಂ.ವೀರಭದ್ರಪ್ಪ (ದ್ವಿತೀಯ), ಸಿಎಆರ್‌ನ ಜೆ.ಧನಪ್ರಕಾಶ್ (ತೃತೀಯ), ಶಸ್ತ್ರರಹಿತ ವಿಭಾಗದಲ್ಲಿ ಎನ್‌ಸಿಸಿ (ಆರ್ಮಿ)ಯ ಎಂ.ಭುವನ್ ಲೋಕೇಶ್ (ಪ್ರ.), ಎನ್‌ಸಿಸಿ ನೌಕದಳದ ಜೆ.ಯಶವಂತ್ ಗೌಡ (ದ್ವಿ.), ಅಬಕಾರಿಯ ವಸಂತ (ತೃ.), ಶಾಲಾ ವಿಭಾಗದಲ್ಲಿ ಪೊಲೀಸ್ ಪಬ್ಲಿಕ್ ಶಾಲೆಯ ನವನೀತ (ಪ್ರ.), ನವೋದಯ ಬಾಲಕರ ತಂಡದ ಗೌತಮ್ (ದ್ವಿ.), ಭಾರತ ಸೇವಾದಳ ಬಾಲಕಿಯರ ತಂಡದ ಜೆ.ಪ್ರಿಯ (ತೃ.), ಪೊಲೀಸ್ ಬ್ಯಾಂಡ್ ವಿಭಾಗದಲ್ಲಿ ಡಿಎಆರ್‌ನ ಸೋಮಶೇಖರ್, ಕೆಎಸ್‌ಆರ್‌ಪಿಯ ನಾಗೇಂದ್ರ, ಸಿಎಆರ್‌ನ ಅಂಥೋನಿ ಪ್ರಕಾಶ್ ಬಹುಮಾನ ಪಡೆದರು.

ಬಿಗಿ ಪೊಲೀಸ್ ಬಂದೋಬಸ್ತ್: ಬನ್ನಿಮಂಟಪದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಮೈದಾನದ ಪ್ರವೇಶ ದ್ವಾರಗಳಲ್ಲಿ ಲೋಹ ಶೋಧಕ ಯಂತ್ರಗಳನ್ನು ಇರಿಸಲಾಗಿತ್ತು. ಮೈದಾನದ ಸುತ್ತಲೂ ಆಯಕಟ್ಟಿನ ಸ್ಥಳದಲ್ಲಿ ಪೊಲೀಸರ ಕಣ್ಗಾವಲು ಇರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net