ಉರಗ ರಕ್ಷಣೆಗೆ ಮುಂದಾದ ಸ್ನೇಕ್ ಅನಿಲ್

21 MUNIRABAD 01
ಉರಗ ರಕ್ಷಕ ಅನಿಲ್ ಜೀರ್ ಅವರು ರಕ್ಷಿಸಿದ ಹೆಬ್ಬಾವನ್ನು ಅರಣ್ಯಕ್ಕೆ ಬಿಡುತ್ತಿರುವುದು.
Published on

ಮುನಿರಾಬಾದ್: ಹಾವು ಎಂದರೆ ಬಹುತೇಕರಿಗೆ ಭಯ. ಆದರೆ ಇಲ್ಲೊಬ್ಬ ಯುವಕ ಅತೀ ಭಯದ ಜೀವಿಯನ್ನು ರಕ್ಷಿಸುವುದಕ್ಕಾಗಿಯೇ ಜೀವನ ಮುಡಿಪಾಗಿಟ್ಟಿದ್ದಾನೆ. ಹಿಟ್ನಾಳ ಗ್ರಾಮದ 24 ವಷರ್ದ ಈ ಉರಗ ಪ್ರೇಮಿ ಅನಿಲ್ ಜೀರ್ ಅವರು ಈವರೆಗೆ 3,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಅವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ‘ಸ್ನೇಕ್ ಅನಿಲ್’ಎಂದೇ ಖ್ಯಾತಿ ಗಳಿಸಿದ್ದಾರೆ. ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘಷರ್ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, 3,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಅವುಗಳಿಗೆ ಮರು ಜೀವ ತುಂಬಿರುವ ಅನಿಲ್, ಉರಗಗಳನ್ನು ರಕ್ಷಿಸುವುದನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಾವುಗಳು ಮನೆ, ತೋಟ ಅಥವಾ ಇತರ ಜನವಸತಿ ಪ್ರದೇಶಗಳಿಗೆ ನುಗ್ಗಿದಾಗ, ಅನಿಲ್‌ಗೆ ಕರೆ ಹೋಗುತ್ತದೆ. ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ವೈಜ್ಞಾನಿಕ ವಿಧಾನಗಳನ್ನು ಬಳಸಿ, ಹಾವುಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬರುತ್ತಾರೆ.

ವಿವಿಧ ಜಾತಿಯ ಹಾವುಗಳ ರಕ್ಷಣೆ:

ವಿಷಪೂರಿತ ನಾಗರಹಾವು, ರಸೆಲ್ಸ್ ವೈಪರ್, ಹೆಬ್ಬಾವು, ಕೆರೆ ಹಾವು ಅಲ್ಲದೇ ವಿಷರಹಿತ ಹಲವು ಜಾತಿಯ ಹಾವುಗಳನ್ನು ಇವರು ರಕ್ಷಿಸಿದ್ದಾರೆ.

ಹಲವು ಬಾರಿ ಹಾವು ಕಡಿತ:

ಅನಿಲ್ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಹಲವು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ. ಆದರೆ, ಕಚ್ಚಿದ ಹಾವುಗಳು ವಿಷಪೂರಿತವಲ್ಲದ ಕಾರಣ ಯಾವುದೇ ತೊಂದರೆಯಾಗಿಲ್ಲ. ಮುಖ್ಯವಾಗಿ, ಹಾವು ಕಡಿತಕ್ಕೆ ಒಳಗಾದ ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ನಮಗೆ ತಿಳಿದಿರುವುದರಿಂದ ಯಾವುದೇ ಪರಿಣಾಮ ಉಂಟಾಗಲಿಲ್ಲ ಎನ್ನುತ್ತಾರೆ ಅನಿಲ್.

ಜನ ಜಾಗೃತಿಯ ಕೆಲಸ:

ಅನಿಲ್ ಜೀರ್ ಕೇವಲ ಹಾವುಗಳನ್ನು ರಕ್ಷಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಹಾವುಗಳ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಇವರು ಸಂರಕ್ಷಣೆಯ ನಂತರ ಅಲ್ಲಿನ ಸಾರ್ವಜನಿಕರಿಗೆ ಹಾವುಗಳ ಕುರಿತು ಮಾಹಿತಿ ಮತ್ತು ತೊಂದರೆಯಾದಾಗ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಾರೆ.

ಪ್ರತಿ ಜೀವಿಯೂ ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಾವುಗಳನ್ನು ಕಂಡರೆ ಜನರಲ್ಲಿ ಭಯ ಇರಬಹುದು. ಆದರೆ ಅವುಗಳನ್ನು ಕೊಲ್ಲುವ ಬದಲು ಸುರಕ್ಷಿತವಾಗಿ ನನಗೆ ಅಥವಾ ಹತ್ತಿರವಿರುವ ಉರಗ ರಕ್ಷಕರಿಗೆ ತಿಳಿಸಿದರೆ ಅವುಗಳನ್ನು ಸಂರಕ್ಷಸಿ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡುತ್ತಾರೆ. ಪರಿಸರದಲ್ಲಿನ ಪ್ರತಿಯೊಂದು ಜೀವಿಗಳನ್ನು ಕಾಪಾಡುವುದು ನಮ್ಮ ಕರ್ತವ್ಯ.

ಅನೀಲ್ ಜೀರ್

ಹಿಟ್ನಾಳ ಗ್ರಾಮದ ಉರಗ ರಕ್ಷಕ (70907 89757)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net