

ಮೈಸೂರು: ಉರಗ ತಜ್ಞ ಸ್ನೇಕ್ ಶ್ಯಾಮ್ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ 2 ಕೋತಿ, 3 ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು-ಕೆಆರ್‌ಎಸ್ ಮುಖ್ಯರಸ್ತೆಯ ಶ್ರೀರಂಗಪಟ್ಟಣ ತಾಲೂಕಿನ ಮೊಗರಹಳ್ಳಿ ಮಂಟಿ ಗ್ರಾಮದಲ್ಲಿರುವ ಸ್ನೇಕ್ ಶ್ಯಾಮ್ ಮನೆಯ ಮೇಲೆ ಮೈಸೂರು ಪೊಲೀಸರು, ಅರಣ್ಯ ಸಂಚಾರಿ ದಳದ ಪೊಲೀಸರು ನ. 27ರಂದು ದಾಳಿ ನಡೆಸಿ ಪರಿಶೀಲಿಸಿದಾಗ 2 ಕೋತಿ, 3 ಆಮೆ ಪತ್ತೆಯಾದವು.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ವನ್ಯಜೀವಿಗಳನ್ನು ಮನೆಯಲ್ಲಿ ಸಾಕುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಸ್ನೇಕ್ ಶ್ಯಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಈ ಪ್ರಾಣಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕುರಿತು ಶ್ರೀರಂಗಪಟ್ಟಣದ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೂ ವರದಿ ಸಲ್ಲಿಸಲಾಗಿದೆ. ಸ್ನೇಕ್ ಶ್ಯಾಮ್ ಅವರಿಂದ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ.
ವಶಕ್ಕೆ ಪಡೆದ 2 ಕೋತಿಗಳನ್ನು ಬೋಗಾದಿ ರೂಪಾನಗರದಲ್ಲಿರುವ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಗೆ ಹಾಗೂ ಆಮೆಗಳನ್ನು ಶ್ರೀರಂಗಪಟ್ಟಣದ ಆರ್‌ಎಫ್‌ಒ ಅವರ ಸುಪರ್ದಿಗೆ ಒಪ್ಪಿಸಲಾಗಿದೆ.
ಹಾವುಗಳೊಂದಿಗೆ ಕೋತಿ ಸೇರಿದಂತೆ ಕೆಲ ಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, 2-3 ತಿಂಗಳ ಹಿಂದೆ ಆಲನಹಳ್ಳಿ ಅಪಾರ್ಟ್‌ಮೆಂಟ್ ಬಳಿ ಅಪಘಾತದಿಂದ ಗಾಯಗೊಂಡಿದ್ದ ಒಂದು ಕೋತಿ ಹಾಗೂ ಶ್ರೀರಾಂಪುರದಲ್ಲಿ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ಮತ್ತೊಂದು ಕೋತಿಯನ್ನು ರಕ್ಷಿಸಿದ್ದೆ. ಅವುಗಳನ್ನು ನನ್ನ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡುತ್ತಿದ್ದೆ. ಅಲ್ಲದೆ, 3 ತಿಂಗಳ ಹಿಂದೆ ಕುಕ್ಕರಹಳ್ಳಿ ಕೆರೆ, ಹೆಬ್ಬಾಳು ಬಳಿ ಪ್ರತ್ಯೇಕ ಸ್ಥಳದಲ್ಲಿ ಅನಾರೋಗ್ಯ ಸ್ಥಿತಿಯಲ್ಲಿ ಸಿಕ್ಕಿದ್ದ 3 ಆಮೆಗಳನ್ನು ರಕ್ಷಣೆ ಮಾಡಿ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡುತ್ತಿರುವ ಮಾಹಿತಿ ಅರಿಯದೆ, ಅಕ್ರಮವಾಗಿ ಇಟ್ಟುಕೊಂಡಿದ್ದಾರೆಂದು ಯಾರೋ ತಪ್ಪಾಗಿ ಅರ್ಥೈಸಿ ದೂರು ನೀಡಿದ್ದಾರೆ ಎಂದು ಸ್ನೇಕ್ ಶ್ಯಾಮ್ ಹೇಳಿದ್ದಾರೆ.
ಈ ಪ್ರಾಣಿಗಳನ್ನು ರಕ್ಷಣೆ ಮಾಡಿ ಆರೈಕೆ ಮಾಡುವ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಹಾಗೆ ಮಾಡಿಲ್ಲ. ಅದರಿಂದಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ ದಾಖಲಾಗಿದೆ ಎಂದು ಪ್ರಾಣಿತಜ್ಞರು ಹೇಳಿದ್ದಾರೆ.
ಅರಣ್ಯ ಸಂಚಾರಿ ಪೊಲೀಸರ ಬಳಿ ಖುದ್ದು ಸ್ನೇಕ್ ಶ್ಯಾಮ್ ಈ ಕುರಿತು ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.