ಕಾಂಗ್ರೆಸ್ ಸರ್ಕಾರದಿಂದ ಹಿಂದುಗಳ ದಮನಕಾರಿ ನೀತಿ

Repressive policy of Hindus by Congress government
ಮುದ್ದೇಬಿಹಾಳದಲ್ಲಿ ನಮ್ಮ ಗೋವು ನಮ್ಮ ತಾಯಿ ಕಾರ್ಯಕ್ರಮದಲ್ಲಿ ಜಗದೀಶ ಪಂಪಣ್ಣವರ, ಗಿರೀಶಗೌಡ ಪಾಟೀಲ, ಸಂಜು ಬಾಗೇವಾಡಿ, ನಾಗೇಶ ಕವಡಿಮಟ್ಟಿ ಅವರನ್ನು ಸನ್ಮಾನಿಸಲಾಯಿತು. ಎ.ಎಸ್.ಪಾಟೀಲ ನಡಹಳ್ಳಿ, ಶಿವಯೋಗೆಪ್ಪ ರಾಂಪೂರ, ಮಹದೇವಯ್ಯ ಶಾಸಿ, ಸಂಗಯ್ಯ ಶರಣರು, ಲಾಲಲಿಂಗೇಶ್ವರ ಶರಣರು, ಅಜೀತ ಕುಲಕರ್ಣಿ ಇತರರಿದ್ದರು.
Published on

ಮುದ್ದೇಬಿಹಾಳ: ರಾಜ್ಯದಲ್ಲಿ ಹಿಂದುಗಳನ್ನು ಸದೆಬಡಿಯುವ ಹುನ್ನಾರ, ಹಿಂದುಗಳ ಪವಿತ್ರ ಭಾವನೆ, ನಂಬಿಕೆ, ಪರೋಪಕಾರ ಸಿದ್ಧಾಂತಗಳನ್ನು ಗೋಹತ್ಯೆ ಮೂಲಕ ಅವಮಾನಿಸುವ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದುಗಳ ಕುರಿತು ದಮನಕಾರಿ ನೀತಿ ಅನುಸರಿಸಲಾಗುತ್ತಿದೆ. ಹಿಂದು ಜಾಗೃತನಾಗಬೇಕು ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಗಣೇಶನಗರದಲ್ಲಿರುವ ಶ್ರೀರಾಮದೇವ ಸಭಾ ಭವನದಲ್ಲಿ ವಿಶ್ವ ಗೋರಕ್ಷಾ ಸಮಿತಿ ಶುಕ್ರವಾರ ಏರ್ಪಡಿಸಿದ್ದ ನಮ್ಮ ಗೋವು, ನಮ್ಮ ತಾಯಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ, ಜಿಲ್ಲೆಗೊಂದು ಗೋಶಾಲೆ ಪ್ರಾರಂಭಿಸುವ, ಅನುದಾನ ಕೊಡುವ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಹಿಂದುಗಳ ಆಚರಣೆಗೆ, ಸಂಭ್ರಮಕ್ಕೆ ಪೊಲೀಸ್ ಅನುಮತಿ ಪಡೆದುಕೊಳ್ಳುವ ಕೆಟ್ಟ ಪರಿಸ್ಥಿತಿ ರಾಜ್ಯದಲ್ಲಿದೆ. ನಸುಕಿನ 5 ಗಂಟೆಗೆ ಜೋರಾಗಿ ಸೌಂಡ್ ಹಾಕುವವರಿಗೆ ಅನುಮತಿಯೇ ಬೇಕಾಗಿಲ್ಲ. ರಾಜ್ಯದಲ್ಲಿ ಗೋಮಾತೆ ಮೇಲೆ ನಿರಂತರ ದೌರ್ಜನ್ಯ, ಹತ್ಯೆ ನಡೆಯುತ್ತಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದರು.

ಹಸುವಿನ ಕೆಚ್ಚಲು ಕೋಯ್ದ ಚಾಮರಾಜಪೇಟೆ ಘಟನೆಯಲ್ಲಿ ಬೇರೆ ರಾಜ್ಯದವನನ್ನು ಬಂಧಿಸಿ ಜೈಲಿಗೆ ಕಳುಹಿಸಿ, ಅವನು ಕುಡುಕ, ಮಾನಸಿಕ ಅಸ್ವಸ್ಥ ಎಂದು ಗೃಹ ಸಚಿವರು ಹೇಳುತ್ತಾರೆ. ಕುಡುಕರು, ಮಾನಸಿಕ ಅಸ್ವಸ್ಥರು ಅಂಥ ಕೃತ್ಯ ಮಾಡುವುದು ಸಾಧ್ಯವೇ ಇಲ್ಲ. ಸರ್ಕಾರಕ್ಕೆ ಎಲ್ಲ ಗೊತ್ತಿದ್ದರೂ ಸುಮ್ಮನಿದೆ. ವ್ಯವಸ್ಥಿತ ಸಂಘಟನೆಗಳು ಕೆಲಸ ಮಾಡುತ್ತಿವೆ ಎಂದರು.

ವಿಎಚ್‌ಪಿ, ಭಜರಂಗದಳ ತಾಲೂಕು ಅಧ್ಯಕ್ಷ ಶಿವಯೋಗೆಪ್ಪ ರಾಂಪೂರ, ಯಲಗೂರದ ಪ್ರಮೋದಾತ್ಮ ಗೋ ಸಂರಕ್ಷಣಾ ಕೇಂದ್ರದ ಮುಖ್ಯಸ್ಥ ಅಜೀತ ಕುಲಕರ್ಣಿ, ಗದಗ ವೀರೇಶ್ವರ ಪುಣ್ಯಾಶ್ರಮದ ಸಂಗಯ್ಯ ಸ್ವಾಮಿಗಳು, ಶರಣ ಸೋಮನಾಳದ ಮಹದೇವ ಶಾಸಿಗಳು ಮಾತನಾಡಿದರು. ದುರ್ಗಾಪರಮೇಶ್ವರಿ ಆಶ್ರಮದ ಲಾಲಿಂಗೇಶ್ವರ ಶರಣರು ಸಾನ್ನಿಧ್ಯ ವಹಿಸಿದ್ದರು.

ಶಾಸಕರ ಮನೆ ಮುಂದೆ ಸೆಗಣಿ ಸಾರಿಸಲು ಹೋಗಿ ಜೈಲುಪಾಲಾಗಿದ್ದ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಕಾರ್ಯದರ್ಶಿಗಳಾದ ಸಂಜು ಬಾಗೇವಾಡಿ, ನಾಗೇಶ ಕವಡಿಮಟ್ಟಿ, ಯುವ ಮೋರ್ಚಾ ಅಧ್ಯಕ್ಷ ಗಿರೀಶಗೌಡ ಪಾಟೀಲ ಹಿರೇಮುರಾಳ ಅವರನ್ನು ಸನ್ಮಾನಿಸಲಾಯಿತು. ಚಿಣ್ಣರಾದ ಕನಿಶಾ ಪಟೇಲ, ಭೂಮಿಕಾ ವೈಷ್ಣವ, ರವಿನಾ ಜಾಟ ಗೋಮಾತೆ ಶ್ಲೋಕ ಹೇಳಿದರು. ಡಾ.ವೀರೇಶ ಪಾಟೀಲ ಸ್ವಾಗತಿಸಿದರು. ಬಸಯ್ಯ ನಂದಿಕೇಶ್ವರಮಠ ನಿರ್ವಹಿಸಿದರು. ವೈಷ್ಣವ ಸಮಾಜದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ರಸ್ತೆ ಮೇಲೆ ರಂಗೋಲಿ ಹಾಕಿ, ಗೋ ಮಾತೆಗೆ ಎಡೆ ತಿನ್ನಿಸಿ, ಪೂಜಿಸಲಾಯಿತು.

ಸಂಕ್ರಮಣ ದಿನದಂದು ರಾಜ್ಯಾದ್ಯಂತ ನೀಡಿದ್ದ ಕರೆ ಪಾಲಿಸಲು ಮುಂದಾಗಿದ್ದ ಗೋಪ್ರೇಮಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದು ಶಾಸಕರ ಮನೋಭಾವ ತೋರಿಸುತ್ತದೆ. -ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಶಾಸಕರು ಭಾರತೀಯ ಗೋತಳಿಗಳ ಸಂಖ್ಯೆ 64 ರಿಂದ 32ಕ್ಕಿಳಿದಿದೆ. ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಲು ಗೋಸಂತತಿ ನಾಶವೇ ಕಾರಣ. ಆಕಳು ಮತ್ತು ಮನುಷ್ಯನ ಹಾರ್ಟ್ ಬೀಟ್ ಸಿಂಕ್ ಆಗುವ ಕಾರಣಕ್ಕೆ ಅಮೆರಿಕದಲ್ಲಿ ಸಂಶೋಧನೆ ನಡೆದಿವೆ. ಜನರನ್ನು ರೋಗಮುಕ್ತಗೊಳಿಸುವ ಅಗತ್ಯ ಹೆಚ್ಚಾಗಿದೆ. -ಅಜೀತ ಕುಲಕರ್ಣಿ, ಮುಖ್ಯಸ್ಥರು, ಪ್ರಮೋದಾತ್ಮ ಗೋರಕ್ಷಣಾ ಕೇಂದ್ರ, ಯಲಗೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net