

ಶಿವಮೊಗ್ಗ: ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಶಾಸನಸಭೆಯಲ್ಲಿ ಮೂರನೇ ದರ್ಜೆ ಭಾಷೆ ಬಳಸಿ ಕಚ್ಚಾಡುವ ಮೂಲಕ ಪವಿತ್ರವಾದ ಸ್ಥಳದ ಮಹತ್ವವನ್ನು ಹಾಳು ಮಾಡಿರುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಬಗೆಹರಿಸಲು ಪ್ರಯತ್ನಿಸಬೇಕಿತ್ತು. ಆದರೆ ಜನಪ್ರತಿನಿಧಿಗಳು ಅದನ್ನು ಮರೆತು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ನಿಂದಿಸಿರುವುದು ನಾಡಿನ ಜನರಿಗೆ ಮಾಡಿದ ಅವಮಾನ. ಇಡೀ ಪ್ರಕರಣದಿಂದ ಜನರ ಬಗ್ಗೆ ನಮ್ಮನ್ನಾಳುವವರಿಗೆ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎಂಎಲ್‌ಸಿ ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಸದನದ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಸಮಸ್ಯೆ ಬಗೆಹರಿಸಲು ಇರುವ ಸದನದಲ್ಲಿ ಕೀಳುಮಟ್ಟದಲ್ಲಿ ಪರಸ್ಪರ ನಿಂದನೆ ಮಾಡುತ್ತಾ ಕುಳಿತರೆ ಹೇಗೆ ಎಂದು ಪ್ರಶ್ನಿಸಿದ ಅವರು, ಪೊಲೀಸರು ಸಿ.ಟಿ.ರವಿ ಅವರನ್ನು ನಡೆಸಿಕೊಂಡ ರೀತಿಯನ್ನೂ ಖಂಡಿಸಿದರು.
ಭೂಸುಧಾರಣಾ ಕಾಯ್ದೆ ಮತ್ತು ಎಂಎಸ್‌ಪಿ ಕುರಿತು ದೆಹಲಿಯಲ್ಲಿ ರೈತರು ಮತ್ತು ಸರ್ಕಾರದ ನಡುವೆ ಸಂಘರ್ಷ ಶುರುವಾಗಿದೆ. ರೈತರಿಗೆ ಎಂಎಸ್‌ಪಿಯಿಂದಲೇ ಸಮಸ್ಯೆಯಾಗಿದೆ. ಎಂಎಸ್‌ಪಿ ಶಾಸನಬದ್ಧವಾಗಿ ಜಾರಿಯಾಗಬೇಕು. ಇದರಿಂದ ರೈತನಿಗೆ ಮೋಸ ಆಗುವುದು ತಪ್ಪುತ್ತದೆ. ಕನಿಷ್ಠ ಬೆಂಬಲ ಬೆಲೆ ಮತ್ತು ಸ್ವಾಮಿನಾಥನ್ ವರದಿ ಜಾರಿಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಇದುವರೆಗೂ ಆ ಕೆಲಸ ಆಗಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.
ರೈತ ಮುಖಂಡರಾದ ಉಮೇಶ್ ಪಾಟೀಲ್, ಮಂಜುನಾಥ್ ಗೌಡ, ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ, ಭಕ್ತರ ಹಳ್ಳಿ ಭೈರೇಗೌಡ, ಸೊರಬದ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.