

ಸೊರಬ: ಆರ್ಡಿಪಿಆರ್ ಅಡಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಶಿಷ್ಟಾಚಾರ ಪಾಲನೆ ಮಾಡದೆ, ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೆ ಕಾರ್ಯಕ್ರಮ ನಡೆಸಿದ್ದು ತಾಪಂ ಇಒ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಆಗ್ರಹಿಸಿದರು.
ಶಕ್ರವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಜ.7ರಂದು ರಂಗಮಂದಿರದಲ್ಲಿ ಆರ್ಡಿಪಿಆರ್ ಇಲಾಖೆ ಅಡಿಯಲ್ಲಿ ಗ್ರಾಪಂ ನೂತನ ಸದಸ್ಯರಿಗೆ ಹಮ್ಮಿಕೊಂಡ ಕಾರ್ಯಗಾರದಲ್ಲಿ ಯಾವುದೇ ಶಿಷ್ಟಾಚಾರ ಪಾಲನೆಯಾಗಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ, ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡದೆ ನಡೆಸಿದ ಕಾರ್ಯಕ್ರಮವಾಗಿದೆ. ಅಲ್ಲದೆ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರಿಗೆ ಮಾಡಿದ ಅವಮಾನವಾಗಿದ್ದು ಇಒ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಆನವಟ್ಟಿ ಮೂಲಕ ಹಾದುಹೋದ ಹೆದ್ದಾರಿಯ ಬೀದಿ ದೀಪಗಳ ಅಳವಡಿಕೆಗೆ ಸಂಸದರು 2.5 ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಲದೆ ತಾಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ, ಸಂಸದರು ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಆದರೆ ಅಧಿಕಾರಿಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಶಿಷ್ಟಾಚಾರದ ಪ್ರಕಾರ ನಡೆಸದೆ, ಮಾಧ್ಯಮ ಪ್ರತಿನಿಧಿಗಳನ್ನು ಸೇರಿ ಯಾರಿಗೂ ತಿಳಿಸದೆ ಕಾರ್ಯಕ್ರಮ ನಡೆಸುವ ಮೂಲಕ ಸರ್ಕಾರಕ್ಕೆ, ಸಿಎಂ ಹಾಗೂ ಸಂಸದರಿಗೆ ಅವಮಾನ ಮಾಡುತ್ತಿದ್ದಾರೆ. ಸರ್ಕಾರ ಕೋಟ್ಯಂತರ ರೂಪಾಯಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡಿರುವ ಅನುದಾನ ಜನಪ್ರತಿನಿಧಿಗಳಿಗೆ ಹಾಗೂ ಜನರಿಗೆ ತಿಳಿಯಬೇಕು ಎಂದು ಹೇಳಿದರು. ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಇದ್ದರು.
ತಾಪಂ ಕೆಡಿಪಿ ಸಭೆ ಮುಂದೂಡಿಕೆ: ತಾಪಂ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕಕೆ ಕೆಡಿಪಿ ಸಭೆ ಏರ್ಪಡಿಸಿದ್ದು ಬಿಸಿಎಂ, ಪಿಎಂಜಿಎಸ್ವೈ ಹಾಗೂ ಆನವಟ್ಟಿ ಮೆಸ್ಕಾಂ ಅಧಿಕಾರಿಗಳನ್ನು ಹೊರತುಪಡಿಸಿ ತಾಪಂ ಇಒ ಸೇರಿ ಇತರ ಇಲಾಖೆಗಳ ಅಧಿಕಾರಿಗಳು ಸಕಾಲದಲ್ಲಿ ಆಗಮಿಸದ ಕಾರಣ, ಸಭೆಯನ್ನು ಜ.11ಕ್ಕೆ ಮುಂದೂಡಲಾಯಿತು. ನಂತರ 11.30ರ ಒಳಗಾಗಿ ಬಹುಪಾಲು ಅಧಿಕಾರಿಗಳು ಸಭೆಗೆ ಆಗಮಿಸಿದರು. ಆದರೆ ಸಭೆಗೆ ಸಕಾಲದಲ್ಲಿ ಆಗಮಿಸಿಲ್ಲ ಎಂದು ಅಧಿಕಾರಿಗಳಿಗೆ ನೋಟೀಸ್ ನೀಡಲು ತೀರ್ವನಿಸಲಾಯಿತು. ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸ್ಥಾಯಿ ಸಮಿತಿ ಅಧ್ಯಕ್ಷ ನರೇಂದ್ರ ಓಡೆಯರ್ ಇತರರಿದ್ದರು.