ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಪ್ರಾತಿನಿಧ್ಯ

10HSN3
Published on

ಹಾಸನ: ಸಿಎಂ ಬಿ.ಎಸ್.ಯಡಿಯೂರಪ್ಪ ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳ ಅಭಿವೃದ್ಧಿಗೆ ಪ್ರಾತಿನಿಧ್ಯ ನೀಡಿದ್ದು ಪ್ರಾದೇಶಿಕ ಅಸಮಾನತೆ ತೊಡೆದು ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಬಾಲಾಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2020-21ನೇ ಸಾಲಿನ ಬಜೆಟ್ ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೃಷಿ, ಹೈನುಗಾರಿಕೆ, ಕೈಗಾರಿಕೆ, ಶಿಕ್ಷಣ, ಜಲ ಸಂಪನ್ಮೂಲ, ರಸ್ತೆ, ಆರೋಗ್ಯ, ಹಿಂದುಳಿದ ವರ್ಗ ಹೀಗೆ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗಮನ ಹರಿಸಿದೆ. ಪ್ರಚಾರಕ್ಕಾಗಿ ಅಗ್ಗದ ಯೋಜನೆಗಳನ್ನು ಘೋಷಿಸದೆ ಅಭಿವೃದ್ಧಿಯನ್ನೇ ಮುಖ್ಯಮಂತ್ರಿ ಗಮನದಲ್ಲಿಟ್ಟಿಕೊಂಡಿದ್ದಾರೆ. ಅತಿವೃಷ್ಟಿಯಿಂದ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಸರ್ಕಾರ ಬಜೆಟ್ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಿಸಿದೆ ಎಂದು ಹೇಳಿದರು.

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಾವಯವ ಕೃಷಿ ಪ್ರೋತ್ಸಾಹಕ್ಕೆ ಅನುದಾನ, ಜಲ ಸಂರಕ್ಷಣೆಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಗ್ರಾಮ ಕ್ಯಾಲೆಂಡರ್, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದವರಿಗೆ 1 ಲಕ್ಷ ರೂ. ನಗದು ಬಹುಮಾನ, ಮಹದಾಯಿಗೆ 500 ಕೋಟಿ ರೂ. ನೀಡಿರುವುದು ಒಳ್ಳೆಯ ಯೋಚನೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್, ಡಿ.ವೈ.ಗೋಪಾಲ್, ಯುವ ಮೋರ್ಚಾ ಅಧ್ಯಕ್ಷ ಎಚ್.ಎನ್.ನಾಗೇಶ್, ಸೀ.ಚ.ಯತೀಶ್ವರ್, ಎಸ್.ಕೆ.ವೇಣುಗೋಪಾಲ್, ಭಾಸ್ಕರ್, ವಿಜಯ್ ವಿಕ್ರಂ, ವಿಜಯಕುಮಾರ್, ಸುಜಾತಾ ಚನ್ನಕೇಶವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net