

ಚಿತ್ರದುರ್ಗ: ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಹಸಿರು ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ 2.40 ಲಕ್ಷ ಹೆಕ್ಟೇರ್ ಕೃಷಿ, ತೋಟಗಾರಿಕೆ ಬೆಳೆ ಹಾಳಾಗಿದ್ದು, 189.63 ಕೋಟಿ ರೂ. ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿ ದಿವ್ಯಾಪ್ರಭು ಹೇಳಿದರು.
ಜಮೀನುಗಳಿಗೆ ತೆರಳುವ ಮುನ್ನ ಡಿಸಿ ಕಚೇರಿಯಲ್ಲಿ ತಂಡಕ್ಕೆ ಶನಿವಾರ ಬೆಳಗ್ಗೆ ಮಾಹಿತಿ ನೀಡಿದ ಡಿಸಿ, ಈ ಬಾರಿ ಮುಂಗಾರು ತಡವಾಗಿದೆ. ಜೂನ್-ಜುಲೈನಲ್ಲಾದ ಮಳೆಯಿಂದಾಗಿ ಶೇ.94 ಬಿತ್ತನೆಯಾಗಿತ್ತು. ಆದರೆ, ಆಗಸ್ಟ್‌ನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದಾಗಿ ಜಿಲ್ಲಾದ್ಯಂತ ತೇವಾಂಶದ ಕೊರತೆ ಕಾಡಿತು. ಜೂನ್‌ನಿಂದ ಆಗಸ್ಟ್‌ವರೆಗೆ 174 ಮಿಮೀ ಬದಲಿಗೆ ಆದ 135 ಮಿ.ಮೀ. ಮಳೆಯೂ ಸಕಾಲಕ್ಕೆ ಬರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಹಸಿರು ಕಾಣಿಸುತ್ತಿದ್ದರೂ ಯಾವುದೇ ಇಳುವರಿ ಬಂದಿಲ್ಲ, ಈರುಳ್ಳಿ ಕೂಡ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ ಎಂದು ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ 10.86 ಲಕ್ಷ ಮೆಟ್ರಿಕ್ ಮೇವು ಇರುತ್ತಿತ್ತು. ಆದರೆ, ಈಗ 3.71 ಲಕ್ಷ ಮೆಟ್ರಿಕ್ ಟನ್ ಇದೆ. ಜಿಲ್ಲೆಗೆ ವರ್ಷಕ್ಕೆ ಕನಿಷ್ಠ 11 ಲಕ್ಷ ಮೆಟ್ರಿಕ್ ಟನ್ ಮೇವಿನ ಅಗತ್ಯವಿದ್ದು, ಮೇವಿನ ಕೊರತೆ ನೀಗಿಸಲು ಗೋಶಾಲೆಗಳನ್ನು ಆರಂಭಿಸುವಂತೆ ಕೋರಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮೇವಿನ ಕಿಟ್‌ಗಳನ್ನೂ ರೈತರಿಗೆ ವಿತರಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆ ಕಾಣಿಸುತ್ತಿದ್ದು, ಅಂತರ್ಜಲ ಕುಸಿಯುತ್ತಿದೆ. ನರೇಗಾದಡಿ 150 ದಿನ ಕೆಲಸ ನೀಡಲಾಗುವುದು. ಕಳೆದ 20 ವರ್ಷಗಳಲ್ಲಿ 16 ವರ್ಷಗಳ ಕಾಲ ಸರ್ಕಾರ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಿದೆ ಎಂದು ಅಧ್ಯಯನ ತಂಡಕ್ಕೆ ಡಿಸಿ ಮಾಹಿತಿ ನೀಡಿದರು.