ನಿತ್ಯಾನಂದ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆಂದು ಹೈಕೋರ್ಟ್​ಗೆ ವರದಿ

Nithayananda 29 Dec 19
Published on

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪ ಹೊತ್ತಿರುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಆಧ್ಯಾತ್ಮಿಕ ಪ್ರವಾಸದಲ್ಲಿ ಇದ್ದಾರೆಂಬ ಮಾಹಿತಿ ಇದೆ ಎಂದು ಹೈಕೋರ್ಟ್​ಗೆ ಸಿಐಡಿ ತಿಳಿಸಿದೆ.

ನಿತ್ಯಾನಂದ ಸ್ವಾಮೀಜಿಗೆ ಮಂಜೂರು ಮಾಡಿರುವ ಜಾಮೀನು ರದ್ದು ಕೋರಿ ಲೆನಿನ್ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾ. ಜಾನ್ ಮೈಕೆಲ್ ಕುನ್ಹಾ ಪೀಠಕ್ಕೆ ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿಬಾಲರಾಜ್ ವರದಿ ಸಲ್ಲಿಸಿದರು. ನಿತ್ಯಾನಂದ ಸ್ವಾಮೀಜಿಗೆ ಸಿಐಡಿ ತನಿಖಾಧಿಕಾರಿ ಫೆ.3ರೊಳಗೆ ನೋಟಿಸ್ ಜಾರಿ ಮಾಡಬೇಕು. ಆ ಕುರಿತು ಫೆ.3ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಸೂಚಿಸಿತ್ತು.

ನೋಟಿಸ್ ನೀಡಲು ಶುಕ್ರವಾರ ಆಶ್ರಮಕ್ಕೆ ಹೋಗಿದ್ದೆವು. ಆದರೆ, ನಿತ್ಯಾನಂದ ಸ್ವಾಮೀಜಿ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ ಎಂದು ತಿಳಿದುಬಂತು. ಆದ್ದರಿಂದ, ಅಲ್ಲಿದ್ದ ಅಚಲಾನಂದಗೆ ನೋಟಿಸ್ ತಲುಪಿಸಲಾಗಿದೆ ಎಂದು ಬಾಲಕೃಷ್ಣ ತಿಳಿಸಿದರು. ಈ ವೇಳೆ ಕೋರ್ಟ್​ಗೆ ಹಾಜರಾಗಿ ಪ್ರಮಾಣಪತ್ರ ಸಲ್ಲಿಸಿದ ಕುಮಾರಿ ಅಚಲಾನಂದ, ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಪೊಲೀಸರು ಒತ್ತಾಯಪೂರ್ವಕವಾಗಿ ನೋಟಿಸ್ ನೀಡಿದ್ದಾರೆ ಎಂದು ತಿಳಿಸಿದರು. ಇದಕ್ಕೆ ತನಿಖಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನೋಟಿಸ್ ನೀಡುವ ವಿಧಾನ ಇದೇ ಏನು ಎಂದಿತು. ತನಿಖಾಧಿಕಾರಿ ಬಾಲರಾಜ್ ಕ್ಷಮೆ ಕೋರಿದರು.

ವಿಚಾರಣೆಗೆ ನಿತ್ಯಾನಂದ ಹಾಜರಾತಿ ಅಗತ್ಯವಿಲ್ಲ. ಸಮನ್ಸ್ ಜಾರಿ ನಂತರ ವಿಚಾರಣೆ ನಡೆಸುವುದು ಸೂಕ್ತ ಎಂದು ಸರ್ಕಾರಿ ವಕೀಲರು ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಜಾಮೀನು ರದ್ದು ಕೋರಿದ್ದ ಅರ್ಜಿ ಆದೇಶ ಕಾಯ್ದಿರಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net