

ವಿಜಯವಾಣಿ ವಿಶೇಷ ಕೊಪ್ಪಳ
ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟು ತಿಂಗಳಾಗಿದೆ. ಬಿಜಕಲ್ ಬಾಲಕಿ ಪ್ರಕರಣ ಹೊರತುಡಪಸಿ ಬಾಕಿ ಕುಟುಂಬದವರಿಗೆ ಸರ್ಕಾರ ಘೋಷಿಸಿದ ಪರಿಹಾರ ಬಂದಿಲ್ಲ.
ಮಳೆಗಾಲ ಆರಂಭವಾಗುತ್ತಲೇ ಜಿಲ್ಲೆಯಲ್ಲಿ ವಾಂತಿ-ಭೇದಿ ಪ್ರಕರಣ ಹೆಚ್ಚಿ ಆತಂಕ ಸೃಷ್ಟಿಗೆ ಕಾರಣವಾಗಿದೆ. ಈಗಲೂ ಅಲ್ಲಲ್ಲಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ತಿಂಗಳ ಹಿಂದೆ ವಾಂತಿ-ಭೇದಿಯಿಂದ ಐವರು ಮೃತಪಟ್ಟಿದ್ದಾರೆ.
ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರತಿನಿಧಿಸುವ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದ ಹೊನ್ನಮ್ಮ (55), ಒಂದೂವರೆ ವರ್ಷದ ಬಾಲಕಿ ಶ್ರುತಿ ಮೃತರಾದರು.
ಬಳಿಕ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ 10 ವರ್ಷದ ಬಾಲಕಿ ನಿರ್ಮಲಾ, ಕನಕಗಿರಿ ಪಟ್ಟಣದ ಕನಕರಾಯ (5) ಹಾಗೂ ಕನಕಗಿರಿ ತಾಲೂಕಿನ ಹುಲಸನಟ್ಟಿ ಗ್ರಾಮದ ಯುವಕ ಸುನೀಲ್ ಕುಮಾರ್ ಕಂದಕೂರು (23) ವಾಂತಿ-ಭೇದಿಯಿಂದ ಮೃತರಾಗಿದ್ದಾರೆ.
ಪ್ರರಕಣ ರಾಜ್ಯದ ಗಮನ ಸೆಳೆದಿದೆ. ಮೊದಲೆರೆಡು ಸಾವು ಸಂಭವಿಸುತ್ತಲೇ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೃತರ ಮನೆಗೆ ಭೇಟಿ ನೀಡಿದ್ದಲ್ಲದೆ ಅವರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದರು.
ಬಳಿಕ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತನಿಖಾ ತಂಡ ನೇಮಿಸಿ ವರದಿ ಪಡೆದಿದೆ. ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕ ನೇತೃತ್ವದ ಮೂವರು ಅಧಿಕಾರಿಗಳು ಬಸರಿಹಾಳ ಹಾಗೂ ಬಿಜಕಲ್ ಗ್ರಾಮಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದೆ.
ವರದಿ ಆಧರಿಸಿ ಬಸರಿಹಾಳ ಪಿಡಿಒ ರವೀಂದ್ರ ಕುಲಕರ್ಣಿ, ಬಿಜಕಲ್ ಪಿಡಿಒ ನಾಗೇಶ ಅರಳಿಗನೂರು ಇಬ್ಬರನ್ನು ಅಮಾನತು ಮಾಡಲಾಗಿದೆ. ಇದಾಗಿ ತಿಂಗಳು ಕಳೆದಿದೆ. ಆದರೆ, ಮೃತರ ಕುಟುಂಬದವರಿಗೆ ಪರಿಹಾರ ಕೈ ಸೇರಿಲ್ಲ. ಐದು ಮೃತರ ಪ್ರಕರಣಗಳಲ್ಲಿ ನಾಲ್ವರ ಅಂತಿಮ ವರದಿ ಬಂದಿದ್ದು, ಬಿಜಕಲ್ ಬಾಲಕಿ ನಿರ್ಮಲಾ ವರದಿ ಬರಬೇಕಿದೆ.
ಅಮಾಯಕರಿಗೆ ಶಿಕ್ಷೆ?
ಬಿಜಕಲ್ ಗ್ರಾಮದಲ್ಲಿ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಿಲ್ಲವೆಂದು ವರದಿ ಬಂದ ಹಿನ್ನೆಲೆಯಲ್ಲಿ ಬೋರ್‌ವೆಲ್ ಬಂದ್ ಮಾಡಲಾಗಿದೆ. ಆದರೆ, ಸಾರ್ವಜನಿಕರು ಬಲವಂತದಿಂದ ಬೋರ್‌ವೆಲ್ ಮರು ಆರಂಭಿಸಿದ್ದಾರೆ. ಇದಾದ ನಾಲ್ಕು ದಿನಕ್ಕೆ ಬಾಲಕಿ ನಿರ್ಮಲಾ ಮೃತಳಾಗಿದ್ದಾಳೆ. ಇದರಲ್ಲಿ ಪಿಡಿಒ ತಪ್ಪಿಲ್ಲ. ತಾವೇ ಬೋರ್‌ವೆಲ್ ಆರಂಭಿಸಿದ್ದಾಗಿ ಜನರು ಜಿಪಂ ಸಿಇಒ ಗಮನಕ್ಕೆ ತಂದಿದ್ದಾರೆ. ಆದರೆ, ತನಿಖಾ ತಂಡ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದಂತೆ ಪಿಡಿಒ ಮೇಲೆ ಆರೋಪ ಹೊರಿಸಿ ಅಮಾನತುಗೊಳಿಸಿದೆ ಎನ್ನಲಾಗಿದೆ. ಈ ಸಂಬಂಧ ಸಿಇಒ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ.
ಪರಿಹಾರ ಬರೋದು ಯಾವಾಗ?
ಒಂದೆಡೆ ಸರ್ಕಾರವೇ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಅಲ್ಲದೇ, ತನಿಖಾ ತಂಡವೂ ವರದಿ ಸಲ್ಲಿಸಿ ಪ್ರಕರಣಕ್ಕೆ ಪಿಡಿಒಗಳನ್ನು ಹೊಣೆ ಮಾಡಿ ಅಮಾನತು ಮಾಡಿ ಆದೇಶಿಸಿದೆ. ಮೃತರ ಮರಣೋತ್ತರ ವರದಿಯೂ ಅಧಿಕಾರಿಗಳ ಕೈ ಸೇರಿದೆ. ಆದರೆ, ಬಿಜಕಲ್ ಬಾಲಕಿ ಹೊರತುಪಡಿಸಿ ಇತರ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ ಕುರಿತು ಸರ್ಕಾರ ಈವರೆಗೂ ವರದಿ, ಕುಟುಂಬದವರ ವಿವರ ಹಾಗೂ ಇನ್ನಿತರ ಮಾಹಿತಿ ಪಡೆದಿಲ್ಲ. ಹೀಗಾಗಿ ಸರ್ಕಾರದ ನಡೆ ಮೇಲೆ ಅನುಮಾನ ಶುರುವಾಗಿದೆ.
ಕಲುಷಿತ ನೀರು ಸೇವಿಸಿ ಮೃತಪಟ್ಟವರ ಪೈಕಿ ನಾಲ್ವರ ಮರಣೋತ್ತರ ವರದಿ ಬಂದಿದೆ. ಬಿಜಕಲ್ ಬಾಲಕಿ ವರದಿ ಬರಬೇಕಿದೆ. ಬಿಜಕಲ್ ಪ್ರಕರಣದಲ್ಲಿ ಪಿಡಿಒ ತಪ್ಪಿಲ್ಲ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಪರಿಹಾರ ಸಿಎಂ ನಿಧಿಯಿಂದ ಬರಬೇಕಿದೆ.ರಾಹುಲ್ ರತ್ನಂ ಪಾಂಡೆಯ, ಜಿಪಂ ಸಿಇಒ, ಕೊಪ್ಪಳ
ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡುವ ಬಗ್ಗೆ ಸಿಎಂ ಜತೆ ಚರ್ಚಿಸಿ ಘೋಷಿಸಿರುವೆ. ಒಂದು ಪ್ರಕರಣದಲ್ಲಿ ಪರಿಹಾರ ವಿತರಿಸಲಾಗಿದೆ. ಉಳಿದವರಿಗೂ ಶೀಘ್ರ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.ಶಿವರಾಜ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ