

ಮೂಡಿಗೆರೆ: ಕಸ್ತೂರಿ ರಂಗನ್ ವರದಿ ಜಾರಿಯಿಂದ ರಾಜ್ಯದ 11 ಜಿಲ್ಲೆಗಳ ಜನತೆ ಸಂಕಷ್ಟ ಅನುಭವಿಸಬೇಕಾಗಿದೆ. ಈ ವರದಿ ವಿರುದ್ಧ ಬಿಜೆಪಿ ಸಂಸದರು ಲೋಕಸಭೆ ಅಧಿವೇಶನದಲ್ಲಿ ಮಾತನಾಡದಿರುವುದು ಈ ಮಾರಕ ವರದಿ ಜಾರಿಯಾಗಲು ಕಾರಣವಾಗಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ದೂರಿದ್ದಾರೆ.
ಪಶ್ಚಿಮ ಘಟ್ಟದ ಜೀವವೈವಿಧ್ಯ ಸಂರಕ್ಷಣೆ ಕುರಿತು ಸಲ್ಲಿಸಿದ್ದ ಮಾಧವ ಗಾಡ್ಗಿಳ್ ವರದಿಗೆ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ಮಾಧವ ಗಾಡ್ಗಿಳ್ ವರದಿಯನ್ನು ಮಾರ್ಪಾಡು ಮಾಡಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಕಸ್ತೂರಿರಂಗನ್ ವರದಿ ಕೂಡ ಜನ ಜೀವನಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಮೈಸೂರು, ಮಂಗಳೂರು, ಉಡುಪಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಸೇರಿ 11ಜಿಲ್ಲೆಗಳ 38 ತಾಲೂಕಿನ 1,576 ಗ್ರಾಮಗಳು 20.668 ಚದರ ಕಿ.ಮೀ. ವ್ಯಾಪ್ತಿಯನ್ನು ಈ ವರದಿ ಸೂಕ್ಷ್ಮ ಪರಿಸರ ಪ್ರದೇಶವೆಂದು ಗುರುತಿಸಿದೆ. ಮೂಡಿಗೆರೆ 27, ಚಿಕ್ಕಮಗಳೂರು 27, ಕೊಪ್ಪ 32, ಎನ್.ಆರ್.ಪುರ 35, ಶೃಂಗೇರಿ 26 ಗ್ರಾಮಗಳು ಒಳಗೊಳ್ಳುತ್ತದೆ. ಮೂಡಿಗೆರೆ ತಾಲೂಕಿನ ಊರುಬಗೆ, ತ್ರಿಪುರ, ಬೆಟ್ಟಗೆರೆ, ಕೊಟ್ಟಿಗೆಹಾರ ಸೇರಿ ಪಶ್ಚಿಮ ಘಟ್ಟದ ಕುದುರೆಮುಖದವರೆಗೂ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಈ ಮಾರಕ ವರದಿಯ ವ್ಯಾಪ್ತಿಗೊಳಪಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮಗಳಲ್ಲಿ ರಸ್ತೆ, ಹೊಸ ಬಡಾವಣೆ ನಿರ್ಮಾಣ, ಕೈಗಾರಿಕೆ, ಫಾರ್ಮ್ ನಂ.33 ಹಾಗೂ 57 ಬಗರ್‌ಹುಕುಂ ಸಾಗುವಳಿ, ಕೃಷಿ, ಹೈನುಗಾರಿಕೆ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿಷೇಧಿಸಲಾಗಿದೆ. 20 ಸಾವಿರ ಚದರ ಅಡಿಗಿಂತ ದೊಡ್ಡ ಕಟ್ಟಡ ನಿರ್ಮಾಣಕ್ಕೆ ನಿಷೇಧ ಹೇರಲಾಗಿದೆ. ಆದಿವಾಸಿಗಳು ಹಾಗೂ ಕೃಷಿಕರಿಗೆ ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಿಲ್ಲ ಎನ್ನುತ್ತಿರುವ ಕೇಂದ್ರ ಸರ್ಕಾರ ಅವರನ್ನು ಗ್ರಾಮಗಳಿಂದ ಹೊರಹಾಕುವ ತಯಾರಿ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದಂತೆ ರಾಜ್ಯಸರ್ಕಾರವೂ ಈ ವರದಿ ತಿರಸ್ಕರಿಸಬೇಕು. ದೆಹಲಿಯಿಂದ ರೂಪಿತವಾದ ಕಾನೂನು ರಾಜ್ಯಕ್ಕೆ ಅಗತ್ಯವಿಲ್ಲ. ಕಸ್ತೂರಿ ರಂಗನ್ ವರದಿ ವ್ಯಾಪ್ತಿಯ 11 ಜಿಲ್ಲೆಗಳಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ ಅವರು ಲೋಕಸಭೆ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ.