ಜನಜೀವನದಲ್ಲಿ ಸ್ಥಳೀಯ ಆಡಳಿತದ ಪಾತ್ರ; ಜನಾಗ್ರಹ ಸಂಸ್ಥೆಯ ವರದಿ ಬಿಡುಗಡೆ

Local body
Published on

ಬೆಂಗಳೂರು: ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಯಲ್ಲಿ ರಚನೆಯಾಗಿರುವ ಸ್ಥಳೀಯ ಆಡಳಿತದಲ್ಲಿ ಆಗುತ್ತಿರುವ ಲೋಪ ಮತ್ತು ವಿಳಂಬದ ಕುರಿತು ಜನಾಗ್ರಹ ಸಂಸ್ಥೆ ನಡೆಸಿದ ಅಧ್ಯಯನದ ವರದಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಕರ್ನಾಟಕದ ನಗರಗಳಲ್ಲಿ ವಿಕೇಂದ್ರೀಕೃತ ಸಹಭಾಗಿತ್ವದ ಆಡಳಿತ ಕುರಿತು ವಿಶ್ಲೇಷಣಾತ್ಮಕ ವಿಮರ್ಶೆ’ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ನಾಗರೀಕ ಜನಜೀವನದ ಮೇಲೆ ಸ್ಥಳೀಯ ಆಡಳಿತದ ಪ್ರಭಾವ ಪ್ರಮುಖವಾಗಿದ್ದು, ಸರ್ಕಾರ ಅಧಿಕಾರ ವಿಕೇಂದ್ರೀಕರಣಗೊಳಿಸುವಲ್ಲಿ, ಕಾಲ ಕಾಲಕ್ಕೆ ಅಗತ್ಯ ಅನುದಾನ ಒದಗಿಸುವಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವಲ್ಲಿ ವಿಲವಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ ಎಂದು ಸಂಸ್ಥೆಯ ಮುಖಸ್ಥ ಸಂತೋಷ ನರಗುಂದ ತಿಳಿಸಿದರು.

74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಪ್ರಕಾರ, ಪಟ್ಟಣಗಳು ಮತ್ತು ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳು ಸ್ವಯಂ ಆಡಳಿತ ನಡೆಸುವುದಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗಿದೆಯಾದರೂ ವಾಸ್ತವದಲ್ಲಿ ಇದು ಸಂಪೂರ್ಣವಾಗಿ ಅನುಷ್ಟಾನಕ್ಕೆ ಬಂದಿಲ್ಲ. ಈ ಲೋಪಗಳನ್ನು ಸರಿಪಡಿಸಿಕೊಳ್ಳಲು ಕೆಲ ಶಿಫಾರಸು ಮಾಡಿರುವ ವರದಿಯನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನರಗುಂದ ವಿವರಿಸಿದರು.

ಸಭೆಯಲ್ಲಿ ಜನಾಗ್ರಹ ಸಂಸ್ಥೆಯ ಶ್ರೀಕಾಂತ್ ವಿಶ್ವನಾಥನ್, ಅಶೋಕ್ ಅಥಾವರ್, ಜೈರಾಜ್, ಲಿಂಗರಾಜ್, ಮಂಜುನಾಥ ಹಂಪಾಪುರ, ದಾನೇಶ್ವರ, ಮಾಜಿ ರಾಜ್ಯ ಚುನಾವಣಾ ಆಯುಕ್ತ ಡಾ. ಬಿ ಬಸವರಾಜು, ವಿಧಾನ ಪರಿಷತ್ ಸದಸ್ಯ ಹೆಚ್.ಎಸ್.ಗೋಪಿನಾಥ್ ರೆಡ್ಡಿ, ಮಾಹಿತಿ ಆಯೋಗದ ಮಾಜಿ ಆಯುಕ್ತ ಕೆ.ಎ.ತಿಪ್ಪೇಸ್ವಾಮಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಹಾಗೂ ಎಲ್ಲ 11 ಪಾಲಿಕೆಗಳ ವಾರ್ಡ್ ಸಮಿತಿ ಬಳಗದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವರದಿಯ ಪ್ರಮುಖ ಅಂಶಗಳು

ಸಂವಿಧಾನ ನಿರ್ದೇಶಿಸಿರುವ ಸ್ಥಳೀಯ ಆಡಳಿತದ 18 ಕಾರ್ಯಗಳಲ್ಲಿ 15ರ ಮೇಲೆ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ನಿಯಂತ್ರಣವಿಲ್ಲ. ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಕಳೆದ 5 ವರ್ಷದ ಸರಾಸರಿ ತೆಗೆದುಕೊಂಡರೆ 22 ತಿಂಗಳ ವಿಳಂಬವಾಗಿದೆ. ಮಹಾನಗರ ಪಾಲಿಕೆಗಳ ರಚನೆ ಹಾಗೂ ಮಹಾಪೌರರ ಆಯ್ಕೆ ಪ್ರಕ್ರಿಯೆಯಲ್ಲಿ 2.5 ವರ್ಷ ವಿಳಂಬವಾಗಿದೆ. ಕರ್ನಾಟಕದ 11 ಮಹಾನಗರ ಪಾಲಿಕೆಗಳಲ್ಲಿ ಕೇವಲ 1ರಲ್ಲಿ ಮಾತ್ರ ವಾರ್ಡ್ ಸಮಿತಿ ಅಸ್ತಿತ್ವದಲ್ಲಿದ್ದು, ಇನ್ನುಳಿದ 10 ರಲ್ಲಿ ವಾರ್ಡ್ ಸಮಿತಿಗಳ ರಚನೆ ಮಾಡಿಲ್ಲ. ನಗರಾಡಳಿತದಲ್ಲಿ ಪಾರದರ್ಶಕತೆ ಕೊರತೆಯಿದ್ದು, ಆಡಳಿತದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಿಲ್ಲ.

ಜನಾಗ್ರಹ ವರದಿಯ ಶಿಫಾರಸು

ಸರ್ಕಾರದ ಅಧಿಕೃತ ಸಂಸ್ಥೆಗಳ ವರದಿಯನ್ನಾಧರಿಸಿ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಹಲವಾರು ನಗರಾಡಳಿತ ಸಂಸ್ಥೆಗಳನ್ನು ಸಂಪರ್ಕಿಸಿ ಸುದೀರ್ಘ ಅಧ್ಯಯನ ನಡೆಸಿರುವ ಜನಾಗ್ರಹ ಸಂಸ್ಥೆ ತನ್ನ ವರದಿಯಲ್ಲಿ ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ನೀಡಿದೆ.

ಚುನಾವಣೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸುವುದು, ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಿಸುವುದು, ನಿಗದಿತ ಸಮಯಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು, ಮೇಯರ್ ಅಥವಾ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಆಯ್ಕೆ ಪ್ರಕ್ರಿಯೆಯನ್ನು ಚುರುಕುಗೊಳಿಸುವುದು, ಚುನಾವಣೆ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಗೆ ತರುವುದು ಸೇರಿದಂತೆ ವಿವಿಧ ಶಿಫಾರಸು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net