

ನರಗುಂದ: ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸರ್ಕಾರಿ ಶಾಲೆ ಕೊಠಡಿಗಳು ಸೋರುತ್ತಿದ್ದರೆ ತಕ್ಷಣ ಅವುಗಳ ಮಾಹಿತಿ ನೀಡಿದರೆ ದುರಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಕೊಠಡಿಗಳು ಸೋರುತ್ತಿದ್ದರೆ ದುರಸ್ತಿಗೆ ಕ್ರಮ ವಹಿಸುವುದು ಕಡ್ಡಾಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೆ. ರಾಜು ಹೇಳಿದರು.
ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖೋಪಾಧ್ಯಾಯರ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ವಿವೇಕ ಯೋಜನೆಯಡಿ ತಾಲೂಕಿನ ವಿವಿಧ 9 ಪ್ರಾಥಮಿಕ ಮತ್ತು ಪ್ರೌಢಶಾಲೆ ಕೊಠಡಿಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಹಂತದಲ್ಲಿವೆ. ಮತಕ್ಷೇತ್ರದ ವಿವಿಧ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಸಕರ ವಿಶೇಷ ಅನುದಾನ ಯೋಜನೆಯಡಿ 6.5 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇದರಲ್ಲಿನ 1.93 ಕೋಟಿ ರೂ. ವೆಚ್ಚದಲ್ಲಿ ನರಗುಂದ ತಾಲೂಕಿಗೆ ಸಂಬಂಧಿಸಿದ ವಿವಿಧ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಜುಲೈ ತಿಂಗಳೊಳಗೆ ಶಿಥಿಲಾವಸ್ಥೆಯಲ್ಲಿರುವ ತಾಲೂಕಿನ ಎಲ್ಲ ಶಾಲಾ ಕೊಠಡಿಗಳ ಬಗ್ಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮಾಹಿತಿ ನೀಡಬೇಕು.
ಯಾವುದೇ ಶಾಲೆಗಳು ಸೋರುತ್ತಿರುವುದು ಇನ್ನಿತರೆ ದುರಸ್ತಿ ಕಾರ್ಯಗಳನ್ನು ಹೊಂದಿದ್ದರೆ ಅವುಗಳ ಬಗ್ಗೆ ಮುಖ್ಯೋಪಾಧ್ಯಾಯರು ತಕ್ಷಣ ಮಾಹಿತಿ ನೀಡಬೇಕು ಎಂದು ಸೂಚಿಸಿದರು. 1 ರಿಂದ 10ನೇ ತರಗತಿ ಮಕ್ಕಳಿಗೆ ಈಗಾಗಲೇ ಒಂದು ಜತೆ ಸಮವಸ್ತ್ರ, ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಇನ್ನೊಂದು ಜತೆ ಸಮವಸ್ತ್ರ ನೀಡಬೇಕು. ಬಟ್ಟೆಗಳ ಲಭ್ಯತೆ ಇದೆ. ಬಟ್ಟೆಗಳ ಹೊಲಿಗೆ ಹಣವನ್ನು ಆಯಾ ಶಾಲೆ ಮುಖ್ಯೋಪಾಧ್ಯಾಯರ ಬ್ಯಾಂಕ್ ಖಾತೆಗೆ ಶಿಕ್ಷಣ ಇಲಾಖೆಯಿಂದ ಪಾವತಿಯಾಗಲಿದೆ. ಉಚಿತ ಶೂ, ಸಾಕ್ಸ್‌ಗಳ ಅನುದಾನವು ಬಂದಿದೆ ಎಂದು ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
ಬಿಆರ್‌ಸಿ ಅಧಿಕಾರಿ ಬಿ.ಎಫ್. ಮಜ್ಜಗಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎನ್.ಆರ್. ನೀಡಗುಂದಿ, ಎಂ.ಎಸ್. ಚೂರಿ, ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.