ವಿಚಾರಣೆ ಬೇಗ ಮುಗಿದರೆ 2 ತಿಂಗಳಲ್ಲಿ ವರದಿ

h28-Human Rights 1
Published on

ಹುಬ್ಬಳ್ಳಿ: ಬೇಗ ವಿಚಾರಣೆ ಮುಗಿದರೆ ಬಾಲಕಿ ಹಂತಕ ರಿತೇಶಕುಮಾರ ಎನ್‌ಕೌಂಟರ್ ಪ್ರಕರಣವನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಬಹುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ್‌ಭಟ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವ್ಯಾಪ್ತಿಯಲ್ಲಿಯೇ ಮೊದಲು ದೂರು ದಾಖಲಾಗಿತ್ತು. ಹಾಗಾಗಿ ಕೇಂದ್ರ ಮಾನವ ಹಕ್ಕುಗಳ ಆಯೋಗ ಮಧ್ಯೆ ಬರುವುದಿಲ್ಲ. ನಮ್ಮ ಆಯೋಗದ ಎಡಿಜಿಪಿ ಮತ್ತು ಡಿವೈಎಸ್‌ಪಿ ಅಧಿಕಾರಿಗಳು ತನಿಖೆ ನಡೆಸುವರು. ಇವರು ಕೊಟ್ಟ ವರದಿ ಆಧರಿಸಿ ನಾವು ತನಿಖೆ ನಡೆಸಿ, ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸುತ್ತೇವೆ ಎಂದರು.

ನಮಗೆ ಅಶೋಕನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣಕುಮಾರ ದೂರು ಕೊಟ್ಟಿದ್ದರು. ದೂರು ಆಧರಿಸಿಯೇ ನಾವು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದೇವೆ. ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣ ಆರ್.ಎಂ. ಹಾಗೂ ಪೇದೆಗಳಿಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು. ನಂತರ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದರು.

ಸಿಐಡಿ ಹಾಗೂ ಮಾನವ ಹಕ್ಕುಗಳ ಆಯೋಗ ಪ್ರತ್ಯೇಕವಾಗಿ ತನಿಖೆ ನಡೆಸಬೇಕಾಗುತ್ತದೆ. ಅವರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ನಾವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ನಮ್ಮ ವರದಿ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲೂ ಅವಕಾಶವಿದೆ ಎಂದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ಕಸಿಯುವ ಹಕ್ಕು ಇಲ್ಲ. ಹಕ್ಕಿಗೆ ಧಕ್ಕೆ ಬಂದಾಗ ಮಾನವ ಹಕ್ಕುಗಳ ಆಯೋಗ ಬಂದು ವಿಚಾರಣೆ ನಡೆಸುತ್ತದೆ. ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣದಲ್ಲೂ ಜೀವಿಸುವ ಹಕ್ಕು ಕಸಿಯಲಾಗಿದೆ. ನಮ್ಮ ವ್ಯಾಪ್ತಿಗೆ ಎನ್‌ಕೌಂಟರ್ ಪ್ರಕರಣ ಮಾತ್ರ ದಾಖಲಾಗಿದೆ. ಅಗತ್ಯ ಬಿದ್ದರೆ ಬಾಲಕಿ ಹತ್ಯೆ ಪ್ರಕರಣದ ವಿಚಾರಣೆಯನ್ನೂ ನಡೆಸಬೇಕಾಗುತ್ತದೆ. ಇವೆರಡೂ ಒಂದಕ್ಕೊಂದು ಬೆಸೆದ ಪ್ರಕರಣ ಎಂದರು.

ಸ್ಥಳಕ್ಕೆ ಭೇಟಿ: ಮೃತ ಬಾಲಕಿಯ ಮನೆಗೆ ಹಾಗೂ ಎನ್‌ಕೌಂಟರ್ ನಡೆದ ಸ್ಥಳಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದರು. ಈ ವೇಳೆ ಪೊಲೀಸರಿಂದ ಅಗತ್ಯ ಮಾಹಿತಿ ಸಂಗ್ರಹಿಸಿದರು.

ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜಂಭುನಾಥ ಮಜ್ಜಗಿ, ಎಸಿಪಿ ಶಿವಪ್ರಕಾಶ ನಾಯಕ್ ಇತರರು ಅವರ ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net