

ಮಾನ್ವಿ: ಜನಸಾಮಾನ್ಯರ ಧ್ವನಿಯಾಗಿರುವ ಪತ್ರಿಕೋದ್ಯಮ ಉದ್ಯಮಿಗಳ ಕೈ ಸೇರಿ ವ್ಯಾಪಾರೀಕರಣವಾಗುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ವರದಿಗಳು ಸತ್ಯನಿಷ್ಠವಾಗಿದ್ದು, ಯಾರೊಬ್ಬರನ್ನೂ ಗುರಿಯಾಗಿಸಿ ವರದಿ ಮಾಡುವುದು ಸರಿಯಲ್ಲ. ಜನಪರ ವರದಿಗಳನ್ನು ಮಾಡಬೇಕಿದ್ದು, ಈ ಕುರಿತ ವರದಿ ಮಾಡುವಾಗ ಸತ್ಯಾಂಶಗಳನ್ನು ಅರಿಯಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಭವನ ಇಲ್ಲದಿರುವುದು ನನ್ನ ಗಮನಕ್ಕೆ ಇದೆ. ಈ ಹಿಂದೆ ಪತ್ರಿಕಾ ಭವನಕ್ಕೆ ಸ್ಥಳ ನಿಗದಿ ಮಾಡಲಾಗಿತ್ತು. ಆದರೆ ಕೆಲವರು ಸ್ಥಳದ ಬಗ್ಗೆ ಆಕ್ಷೇಪ ಮಾಡಿದ್ದರಿಂದ ಇದುವರೆಗೂ ಪತ್ರಿಕಾ ಭವನ ಆಗಿಲ್ಲ. ಸಿಎ ನಿವೇಶನ ಸ್ಥಳ ಸಿಕ್ಕರೆ ಒಂದು ವರ್ಷದೊಳಗೆ ಪತ್ರಿಕಾ ಭವನ ಕಟ್ಟಡ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಪತ್ರಕರ್ತರ ಅನೇಕ ಸಮಸ್ಯೆಗಳನ್ನು ಸಿಎಂ ಸಿದ್ದರಾಮಯ್ಯ ಈಡೇರಿಸಿದ್ದಾರೆ. ಪತ್ರಕರ್ತರ ಮಾಶಾಸನ 12 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ವಿಚಾರವನ್ನು ಮತ್ತೊಮ್ಮೆ ಸಿಎಂ ಗಮನಕ್ಕೆ ತರುತ್ತೇನೆ ಎಂದು ಬೋಸರಾಜು ತಿಳಿಸಿದರು.
ಶಾಸಕ ಹಂಪಯ್ಯನಾಯಕ ಮಾತನಾಡಿ, ಸಚಿವ ಎನ್.ಎಸ್.ಬೋಸರಾಜು ಹೇಳಿದಂತೆ ಮುಂದಿನ ವರ್ಷದೊಳಗೆ ಪತ್ರಿಕಾ ಭವನದ ಕಟ್ಟಡ ನಿರ್ಮಾಣ ಮಾಡಲಾಗುವುದು. ಸ್ಥಳದ ಬಗ್ಗೆ ನನಗೆ ಮಾಹಿತಿ ನೀಡಿದರೆ ಕಟ್ಟಡಕ್ಕೆ ಅನುದಾನ ನೀಡಲಾಗುವುದು ಎಂದರು. ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿ, ನಾನು ಶಾಸಕನಾಗಿದ್ದ ವೇಳೆ ಪತ್ರಿಕಾ ಭವನಕ್ಕೆ 10 ಲಕ್ಷ ರೂ. ನಿಗದಿ ಮಾಡಿದ್ದೆ. ಆದರೆ, ಸ್ಥಳ ಸಿಗದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ. ಪತ್ರಕರ್ತರು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ, ಪರಮೇಶ, ತಾಲೂಕು ಅಧ್ಯಕ್ಷ ನಾಗರಾಜ ತಡಕಲ್, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪತ್ರಕರ್ತರಾದ ವೆಂಕಟ್‌ಸಿಂಗ್, ಎನ್.ನಾಗರಾಜ, ಎಂ.ಪಾಷಾ ಹಟ್ಟಿ, ಲಕ್ಷ್ಮಣರಾಯ್ ಕಪಗಲ್, ಹನುಮಂತ ಕೊಟ್ನೆಕಲ್, ತಾಯಪ್ಪ ಹೊಸೂರು, ಅಶೋಕ ತಡಕಲ್, ಜಿತೇಂದ್ರಸ್ವಾಮಿ, ಬಸವರಾಜ, ಗೂಳಪ್ಪ, ನವೀನ್‌ಕುಮಾರ, ವಿಜಯಕುಮಾರ ಇತರರು ಇದ್ದರು.