ಪ್ರತಿಕೃತಿ ದಹನ: ಅಲ್ಪಸಂಖ್ಯಾತರ ಘಟಕ ಖಂಡನೆ

K.G.PETER
Published on

ಮಡಿಕೇರಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಬಿಜೆಪಿ ಕೊಡಗಿನ ಜನರ ಭಾವನೆಗೆ ದಕ್ಕೆ ತಂದಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.


ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಅವರು, ಅಣುಕು ಶವಯಾತ್ರೆ ಮಾಡಿ, ಪ್ರತಿಕೃತಿ ದಹಿಸಿ ವಿಕೃತಿ ಮೆರೆಯುವುದು ಕೊಡಗಿನ ಸಂಸ್ಕೃತಿಯಲ್ಲ. ಬಿಜೆಪಿಯ ಈ ವರ್ತನೆ ಖಂಡನೀಯವೆಂದು ತಿಳಿಸಿದ್ದಾರೆ.


ಕಳೆದ ೧೦ ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ೧೦೦ರ ಗಡಿ ದಾಟಿಸಿದೆ. ಅಡುಗೆ ಅನಿಲ, ರಸಗೊಬ್ಬರ, ಕೃಷಿ ಪರಿಕರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಜನಸಾಮಾನ್ಯರು ಬೆಲೆ ಏರಿಕೆಯ ಹೊರೆಯಿಂದ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷ ಬಿಜೆಪಿ ಮಂದಿಯ ಪ್ರತಿಕೃತಿ ದಹಿಸಿ ವಿಕೃತಿ ಮೆರೆಯುವ ಕಾರ್ಯಕ್ಕೆ ಮುಂದಾಗಿಲ್ಲ. ಬಿಜೆಪಿ ತನ್ನ ಕೀಳು ಮಟ್ಟದ ರಾಜಕಾರಣವನ್ನು ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಸಾಕ್ಷೀಕರಿಸಿದೆ ಎಂದು ಆರೋಪಿಸಿ ಅವರು, ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಕ್ಷಮೆಯಾಚಿಸಬೇಕು ಎಂದು ಪೀಟರ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net