ಪ್ರತಿಕೃತಿ ದಹನ: ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸಮಾಧಾನ

TATU MONNAPPA
Published on

ಮಡಿಕೇರಿ: ವಿರಾಜಪೇಟೆಯ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸಿ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಿರುವ ಬಿಜೆಪಿಯ ಹದ್ದು ಮೀರಿದ ವರ್ತನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜಕೀಯ ಕ್ಷೇತ್ರಕ್ಕೆ ಕಳಂಕವಾಗಿರುವ ಮತ್ತು ಸ್ವಾರ್ಥ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಬಿಜೆಪಿಗರ ನೀಚ ಮನೋಸ್ಥಿತಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಬಿಜೆಪಿಯ ಈ ವರ್ತನೆಯಿಂದ ಕೊಡಗು ಜಿಲ್ಲೆಯ ಘನತೆಗೆ ದಕ್ಕೆಯಾಗಿದೆ ಎಂದು ತಿಳಿಸಿದ್ದಾರೆ.


ವಿರಾಜಪೇಟೆ ಕ್ಷೇತ್ರದಲ್ಲಿ ಪೊನ್ನಣ್ಣ ಅವರ ಜನಪ್ರಿಯತೆ ಹೆಚ್ಚುತ್ತಿರುವುದು ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿರುವುದನ್ನು ಸಹಿಸದ ಬಿಜೆಪಿಗರು ಬೆಲೆ ಏರಿಕೆಯ ನೆಪ ಮಾಡಿಕೊಂಡು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಈ ರೀತಿಯ ಪ್ರತಿಭಟನೆಗಳ ಮೂಲಕ ಪೊನ್ನಣ್ಣ ಅವರ ಮನೋಸ್ಥೈರ್ಯ ಕುಗ್ಗಿಸಬಹುದೆನ್ನುವ ಭ್ರಮೆಯಲ್ಲಿರುವ ಬಿಜೆಪಿ ತಾನು ತೋಡಿದ ಖೆಡ್ಡಾಕ್ಕೆ ತಾನೇ ಬೀಳಲಿದೆ. ಬಿಜೆಪಿಯ ಕೀಳು ಮಟ್ಟದ ವರ್ತನೆಯಿಂದ ಪೊನ್ನಣ್ಣ ಪರ ಜನಬಲ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಅವರ ಅಭಿಮಾನಿಗಳು ಹಾಗೂ ಕ್ಷೇತ್ರದ ಜನ ಯೋಗಕ್ಷೇಮ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಕಾಂಗ್ರೆಸ್ ವತಿಯಿಂದಲೂ ಜೂ.೨೪ ರಂದು ಎಲ್ಲಾ ವಲಯ ಘಟಕಗಳಿಂದ ಎ.ಎಸ್.ಪೊನ್ನಣ್ಣ ಅವರ ಹೆಸರಿನಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದೆಂದು ಟಾಟೂ ಮೊಣ್ಣಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net