

ಹನೂರು: ವಿದ್ಯಾರ್ಥಿ ನಿಲಯದಲ್ಲಿ ಹರಿದಿರುವ ಹಾಸಿಗೆ ಬದಲಿಸುವಂತೆ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಮಳೆ ನೀರು ಕೊಯ್ಲು ನಿರ್ಮಿಸುವಂತೆ ತಾಲೂಕು ಉಸ್ತುವಾರಿ ಕಾರ್ಯದರ್ಶಿ ವೀಣಾ ಸೂಚಿಸಿದರು.
ಸಮೀಪದ ಹುಲ್ಲೇಪುರದ ಬಳಿಯಿರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಭಾನುವಾರ ತಹಸೀಲ್ದಾರ್ ಕೆ.ಎನ್. ಚೈತ್ರಾ ಹಾಗೂ ಬಿಇಒ ಗುರುಲಿಂಗಯ್ಯ ಅವರೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಕಚೇರಿಗೆ ತೆರಳಿ ವಿದ್ಯಾರ್ಥಿಗಳ ದಾಖಲಾತಿ, ಕಲಿಕೆ, ಶಿಕ್ಷಕರ ಸಂಖ್ಯೆ ಹಾಗೂ ವಿದ್ಯಾರ್ಥಿ ನಿಲಯದ ಬಗ್ಗೆ ಪ್ರಾಂಶುಪಾಲ ಪ್ರಗಾಶ್ ನಾಥನ್ ಅವರಿಂದ ಮಾಹಿತಿ ಪಡೆದರು.
ಕಂಪ್ಯೂಟರ್ ಹಾಗೂ ಪ್ರಯೋಗಾಲಯದ ಕೊಠಡಿಗೆ ತೆರಳಿ ಶಿಕ್ಷಕರಿಂದ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಯನ್ನು ನೀಡಿದರು. ಬಳಿಕ ಭೋಜನಾಲಯ ಕೊಠಡಿಗೆ ತೆರಳಿದ ಅವರು, ಅಡುಗೆ ತಯಾರಿಕೆಯನ್ನು ವೀಕ್ಷಿಸಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು.
ಚೆನ್ನಾಗಿ ಓದಬೇಕು: 10ನೇ ತರಗತಿ ಕೊಠಡಿಗೆ ತೆರಳಿದ ಕಾರ್ಯದರ್ಶಿ ಅವರು ನೀಡುತ್ತಿರುವ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಈ ವೇಳೆ ಅವರು ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಆದ್ದರಿಂದ ಪ್ರತಿಯೊಬ್ಬರೂ ಓದಿಗೆ ಹೆಚ್ಚು ಒತ್ತು ನೀಡಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದರತ್ತ ಗಮನ ಹರಿಸಬೇಕು. ಹಾಗೆಯೇ ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ನೀಟ್ ಪರೀಕ್ಷೆ ತೆಗೆದುಕೊಂಡು ಯಶಸ್ಸು ಗಳಿಸಬೇಕು. ಇದರಿಂದ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಹರಿದಿರುವ ಹಾಸಿಗೆ ಬದಲಿಸಿ: ವಿದ್ಯಾರ್ಥಿ ನಿಲಯಕ್ಕೆ ತೆರಳಿದ ಕಾರ್ಯದರ್ಶಿ ಅವರಿಗೆ ಹಾಸಿಗೆ ಹರಿದಿರುವುದು ಹಾಗೂ ಕೊಠಡಿಯಲ್ಲಿ ಸ್ವಚ್ಛತೆ ಇಲ್ಲದಿರುವುದು ಗಮನಕ್ಕೆ ಬಂತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವೀಣಾ ಅವರು, ಹರಿದಿರುವ ಹಾಸಿಗೆಯಲ್ಲಿ ಮಕ್ಕಳು ಮಲಗುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿ, ಸಿಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬೇರೆ ಹಾಸ್ಟೆಲ್‌ಗಳಲ್ಲಿ ಬಳಕೆಗೆ ಬಾರದೆ ಉಳಿದಿರುವ ಹೊಸ ಹಾಸಿಗೆಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಕ್ರಮವಹಿಸಬೇಕು. ಜತೆಗೆ ಕೊಠಡಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.
ವಿಶಾಲವಾದ ಶಾಲಾ ಆವರಣವನ್ನು ವೀಕ್ಷಿಸಿದ ಕಾರ್ಯದರ್ಶಿ ಅವರು ಮಳೆ ನೀರು ಕೊಯ್ಲು ನಿರ್ಮಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಆವರಣದಲ್ಲಿ ಸೊಪ್ಪು, ತರಕಾರಿಗಳನ್ನು ಬೆಳೆಯಲು ಕ್ರಮವಹಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.