ಮೇಲಿಂದ ಮೇಲೆ ದೇವಸ್ಥಾನದ ಕಾಣಿಕೆ ಹುಂಡಿ ಕಳವು; ಹತ್ತು ಪ್ರಕರಣಗಳಾದರೂ ಒಂದೂ ಪತ್ತೆಯಾಗಿಲ್ಲ!

Temple
Published on

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದೇಗುಲಗಳ ಕಾಣಿಕೆ ಹುಂಡಿ ಸರಣಿ ಕಳವು ಪ್ರಕರಣ ಮುಂದುವರಿದಿದ್ದು, ಮಂಗಳವಾರ ತಡರಾತ್ರಿ ತಾಲೂಕಿನ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ಮೂರು ದೇಗುಲಗಳಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಹುಂಡಿಯಲ್ಲಿದ್ದ ಕಾಣಿಕೆ ಹಣ ದೋಚಿ ಪರಾರಿಯಾಗಿದ್ದಾರೆ.

ಬಾಗಿಲು ಮೀಟಿ ಕೃತ್ಯ: ಕೆಂಪಾಜಮ್ಮ, ಬಸವಣ್ಣ, ಮಾರಮ್ಮ ದೇಗುಲಗಳ ಬಾಗಿಲು ಮೀಟಿ ಒಳನುಗ್ಗಿರುವ ದುಷ್ಕರ್ಮಿಗಳು ಕಾಣಿಕೆ ಹಣದೊಂದಿಗೆ ದೇವರ ಮೂರ್ತಿ ಮೇಲಿದ್ದ ಚಿನ್ನಾಭರಣ ದೋಚಿದ್ದಾರೆ.

ಕೇಬಲ್ ಕತ್ತರಿಸಿದ ಕಳ್ಳರು: ಕೃತ್ಯಕ್ಕೂ ಮುನ್ನ ಕೆಂಪಾಜಮ್ಮ ಮತ್ತು ಬಸವಣ್ಣ ದೇವಾಲಯದಲ್ಲಿದ್ದ ಸಿಸಿಟಿವಿ ಕ್ಯಾಮಾರದ ಕೇಬಲ್​ಗಳನ್ನು ಕತ್ತರಿಸಿದ್ದಾರೆ. ಕಾಣಿಕೆ ಹುಂಡಿ ಬೀಗ ಮೀಟಿ ಹಣ ದೋಚಿದ್ದಾರೆ. ಬುಧವಾರ ಬೆಳಗ್ಗೆ ಎಂದಿನಂತೆ ದೇಗುಲದ ಬಾಗಿಲ ತೆರೆಯಲು ಬಂದ ಅರ್ಚಕರಿಗೆ ಕಳವು ಪ್ರಕರಣ ಕಂಡುಬಂದಿದೆ.

ಪೊಲೀಸರ ವಿರುದ್ಧ ಗ್ರಾಮಸ್ಥರ ಕೆಂಗಣ್ಣು: ಕಳೆದ ಮೂರ್ನಾಲ್ಕು ತಿಂಗಳಲ್ಲಿ ಇದು ಗ್ರಾಮಾಂತರ ಜಿಲ್ಲೆಯಲ್ಲಿ 10ನೇ ಪ್ರಕರಣ ಎನ್ನಲಾಗಿದ್ದು, ಗ್ರಾಮಸ್ಥರ ನಿದ್ರೆಗೆಡಿಸಿದೆ. ಇಷ್ಟೂ ಪ್ರಕರಣಗಳಲ್ಲಿ ಇದುವರೆಗೆ ಯಾವ ಕಳ್ಳರು ಸೆರೆ ಸಿಕ್ಕದಿರುವುದರಿಂದ ಗ್ರಾಮಸ್ಥರು ಪೊಲೀಸರ ಮೇಲೆ ಕೆಂಗಣ್ಣು ಬೀರುತ್ತಿದ್ದಾರೆ. ದೇಗುಲಗಳ ಕಳವು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿರುವ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಇದರಿಂದ ಕಳ್ಳರ ಕೃತ್ಯ ಮುಂದುವರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net