

ವಿಜಯಪುರ: ವಕ್ಫ್ ಕಾಯ್ದೆ ರದ್ದು ಪಡಿಸದಿದ್ದರೆ ಮುಂಬರುವ ದಿನಗಳಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
ದೇಶದ ರೈತರ ಜಮೀನುಗಳನ್ನು ನುಂಗಿ ನೀರು ಕುಡಿದು ರೈತರ ಬದುಕನ್ನೇ ಬೀದಿಗೆ ತಳ್ಳಲು ಹೊಂಚು ಹಾಕಿರುವ ವಕ್ಫ್ ಬೋರ್ಡ್ ರೈತರಿಗೆ ಮೋಸ ಮಾಡುತ್ತಿದೆ. ಕಾನೂನು ಏನೇ ಇದ್ದರು ಕೂಡ ವಕ್ಫ್ ಟ್ರಿಬ್ಯೂನಲ್ನಲ್ಲಿಯೇ ರೈತರು ನ್ಯಾಯಕ್ಕಾಗಿ ಪಹಣಿ ಹಿಡಿದುಕೊಂಡು ಕೈ ಕಟ್ಟಿ ನಿಂತು ನ್ಯಾಯ ಕೇಳಬೇಕೆಂಬ ಹುನ್ನಾರ ಇಡೀ ದೇಶದ ರೈತರ ನಿದ್ದೆಗೆಡಿಸುವಂತೆ ಮಾಡಿದ್ದು, ನಮ್ಮದೆ ಆದ ಕಾನೂನನ್ನು ಹೊಂದಿದ್ದೇವೆ ಎಂದು ಬೀಗುತ್ತಿರುವ ವಕ್ಫ್ ನವರಿಗೆ ಬುದ್ದಿ ಕಲಿಸಬೇಕಾದರೆ ಮುಂಬರುವ ಚಳಿಗಾಲದ ಸಂಸತ ಅಧಿವೇಶನದಲ್ಲಿ 1954 ರಲ್ಲಿ ರಚನೆಯಾದ ವಕ್ಪ್ ಕಾಯ್ದೆಯನ್ನೇ ಸಂಪೂರ್ಣ ರದ್ದುಪಡಿಸಿ ಈ ದೇಶದಿಂದಲೇ ವಕ್ಫ್ ಬೋರ್ಡ್ ಪವಿತ್ರ ನೆಲದಿಂದಲೇ ಬೇರುಸಮೇತ ಕೀಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಾಗೇ ಸುಮ್ಮನೆ ಬಿಟ್ಟರೇ, ಮುಂದಿನ ದಿನಗಳಲ್ಲಿ ದೇಶದ ವಕ್ಫ್ ಬೋರ್ಡ್ಗಳು ಇಡೀ ದೇಶವೇ ವಕ್ಪ್ ಬೋರ್ಡ್ಗೆ ಸಂಬಂಧಿಸಿದ್ದು ಎಂದು ವಾದ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಬ್ರಿಟಿಷರಂತೆ ಇವರು ಕೂಡಾ ವಕ್ಪ್ ಬೋರ್ಡ್ಗಳ ಮೂಲಕ ದೇಶವನ್ನೇ ಆಳುವ ಹುನ್ನಾರ ನಡೆಸಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಕ್ಫ್ ಬೋರ್ಡ್ಗಳು ಹೆಮ್ಮರವಾಗಿ ಬೆಳೆಯುವ ಮುಂಚೆ ಇವುಗಳನ್ನು ಬೇರು ಸಮೇತ ಕಿತ್ತಿ ಬಿಸಾಕಬೇಕು. ಸದ್ಯ ವಿವಾದ ಸೃಷ್ಟಿಸಿರುವ ವಕ್ಪ್ ಬೋರ್ಡ್ಗಳ ಗಿಡಗಳನ್ನು ನೆಟ್ಟಿದ್ದೇ ಕಾಂಗ್ರೆಸ್ನವರು. ಅದರ ಉದಯಕ್ಕೆ ಮೂಲ ಕಾರಣವೇ ಕಾಂಗ್ರೆಸ್ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ಹೊಲದಲ್ಲಿರುವ ಕಾಂಗ್ರೆಸ್ ಕಸ (ಪಾರ್ಥೇನಿಯಂ) ಎಂಬುದು ಎಷ್ಟು ವಿಷಕಾರಿಯೋ ಕಾಂಗ್ರೆಸ್ ಪಕ್ಷವು ಅಷ್ಟೇ ವಿಷಕಾರಿ. ದೇಶಕ್ಕೆ ಸ್ವಾತಂತ್ರ ನಾವೇ ತಂದು ಕೊಟ್ಟಿದ್ದೇವೆ ಎಂದು ಹೇಳುತ್ತಾ ಸಿಕ್ಕ ಸ್ವಾತಂತ್ರವನ್ನು ಕಸಿದುಕೊಂಡು ವಕ್ಫ್ ಬೋರ್ಡ್ನವರಿಗೆ ಕೊಡಲು ಹೊರಟ್ಟಿದ್ದಾರೆ. ಪ್ರಧಾನ ಮಂತ್ರಿಗಳು ವಕ್ಫ್ ಬೋರ್ಡ್ಗಳ ಪುಂಡಾಟವನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ಚಳಿಗಾಲದ ಸಂಸತ ಅಧಿವೇಶನದಲ್ಲಿ ರ್ನಿಣಯ ಕೈಗೊಳ್ಳಬೇಕು. ಅಲ್ಲದೆ, ಇಡೀ ವಕ್ಪ್ ಕಾಯ್ದೆಯನ್ನೇ ರದ್ದು ಪಡಿಸುವ ಮೂಲಕ ದೇಶದ ರೈತರು ನೆಮ್ಮದಿಯ ಜೀವನ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಲಾಗುವುದು ಎಂದು ಪ್ರಕಟಣೆಯ ಮೂಲಕ ಅರವಿಂದ ಕುಲಕರ್ಣಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.