ಡೀಮ್ಡ್ ವಿವಿ ಕಾಯ್ದೆ ರದ್ದುಪಡಿಸಿ; ಜಿಲ್ಲಾಡಳಿತಕ್ಕೆ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದಿಂದ ಮನವಿ

DEEMED VV ACT
ವಿಜಯಪುರ ಜಿಲ್ಲಾಡಳಿತಕ್ಕೆ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದಿಂದ ಮನವಿ ಸಲ್ಲಿಸಲಾಯಿತು. ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಹಾಗೂ ಜಗದೇವ ಸೂರ್ಯವಂಶಿ ಇದ್ದಾರೆ.
Published on

ವಿಜಯಪುರ: ರಾಜ್ಯದಲ್ಲಿರುವ ಡೀಮ್ಡ್ ವಿಶ್ವ ವಿದ್ಯಾಲಯದ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದಿಂದ ಶುಕ್ರವಾರ ಜಿಲ್ಲಾಡಳಿತದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಡೀಮ್ಡ್ ವಿವಿಗಳ ಕಾಯ್ದೆ ರದ್ದುಪಡಿಸುವುದರ ಜೊತೆಗೆ ಜಿಲ್ಲೆಗೆ ಪೂರ್ಣಪ್ರಮಾಣದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಮಾಡಬೇಕು. ವಿಜಯಪುರ ಜಿಲ್ಲಾಸ್ಪತ್ರೆಯು ಸುಮಾರು 149 ಎಕರೆಯ ವಿಸ್ತೀರ್ಣದ ವಿಶಾಲ ಜಮೀನು ಹೊಂದಿದ್ದು ಆಸ್ಪತ್ರೆಯ ಆವರಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ , ಟ್ರಾಮಾ ಸೆಂಟರ್, ಡಿಪ್ಲೊಮಾ ಹಾಗೂ ಬಿಎಸ್ಸಿ ನರ್ಸಿಂಗ್ ಕಾಲೇಜುಗಳು, ಆಯುರ್ವೇದಿಕ್ ಆಸ್ಪತ್ರೆ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಹೀಗಾಗಿ ಪೂರ್ಣ ಪ್ರಮಾಣದ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಪಿಪಿಪಿ ಮಾದರಿಯ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುವುದರಿಂದ ಬಡಜನರ ಆರೋಗ್ಯ ರಕ್ಷಣೆಯ ಹಕ್ಕು ಹಾಗೂ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಹಕ್ಕು ಕಸಿದುಕೊಡಂತಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಇರುವ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳು ಬಡ ಜನರ ರಕ್ತ ಹೀರುತ್ತಿವೆ. ಪಿಪಿಪಿ ಮಾದರಿ ಎನ್ನುವುದು ಮೆಡಿಕಲ್ ಮಾಫಿಯಾ ಆಗಿದ್ದು, ಇದೊಂದು ಬಡಜನರ ವಿರೋಧಿ ತಂತ್ರವಾಗಿದೆ. ಜೊತೆಗೆ ಡೀಮ್ಡ್ ವಿಶ್ವವಿದ್ಯಾಲಯ ಹೊಂದಿರುವ ಸಂಸ್ಥೆಗಳು ಅಪರಮಿತ ಅಧಿಕಾರ ಹೊಂದಿದ್ದು ಇವುಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ರಾಜ್ಯದಲ್ಲಿರುವ ಡೀಮ್ಡ್ ಯುನಿವರ್ಸಿಟಿ ಕಾಯ್ದೆಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.

ಇನ್ನೋರ್ವ ಮುಖಂಡ ಜಗದೇವ ಸೂರ್ಯವಂಶಿ ಮಾತನಾಡಿ, ರಾಜ್ಯದಲ್ಲಿ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಹಾಗೂ ಬಡವರಿಗೆ ವೈದ್ಯಕೀಯ ಸೇವೆ ನೀಡಲು ವಿಫಲವಾಗಿರುವ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಸಂಪೂರ್ಣ ವೈದ್ಯಕೀಯ ಶಿಕ್ಷಣವನ್ನು ಸರ್ಕಾರೀಕರಣ ಮಾಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net