

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರಕ್ಕೆ ರೈತರ, ಮಠಗಳ, ಜನಸಾಮಾನ್ಯರ ಹಿತರಕ್ಷಣೆಯ ಬದ್ಧತೆ ಇದ್ದರೆ 1974ರ ಗೆಜೆಟ್ ರದ್ದುಗೊಳಿಸುವ ಮೂಲಕ ವಕ್ಪ್ ಕಾಟ ತಪ್ಪಿಸಬೇಕು. ಈ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗದೇ ಹೋದರೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಪ್ ಬೋರ್ಡ್ಗೆ ಕಾಂಗ್ರೆಸ್ ಸರ್ವಾಧಿಕಾರ ನೀಡಿದೆ. ಇದಕ್ಕೆ ಫುಲ್ಸ್ಟಾಪ್ ಬೀಳದೇ ಇದ್ದರೆ ರೈತರ, ಮಠಮಾನ್ಯಗಳ ಆಸ್ತಿ ಜತೆಗೆ ಕೆರೆ, ಶಾಲೆ, ಮೈದಾನಗಳೂ ವಕ್ಪ್ ಬೋರ್ಡ್ ಪಾಲಾಗಲಿವೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಅವರು ಪಹಣಿಯ ಕಲಂ 11ರಲ್ಲಿ ಇರುವ ವಕ್ಪ್ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ. ಆದರೆ, ಇದೊಂದು ಕಣ್ಣೊರೆಸುವ ತಂತ್ರ. 1974ರ ಗೆಜೆಟ್ ರದ್ದಾದರೆ ಮಾತ್ರ ಪರಿಹಾರ ದೊರಕಲಿದೆ ಎಂದರು.
ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣಕ್ಕಾಗಿ ರೈತರ ಆಸ್ತಿ ಕಬಳಿಸುವ ಕಾರ್ಯ ಮಾಡುತ್ತಿದೆ. ರೈತರ ಹಾಗೂ ದೇವಸ್ಥಾನಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಇಸ್ಲಾಂ ಕಾನೂನಿನಲ್ಲಿ ಇಸ್ಲಾಂ ಪಾಲಿಸದ ವ್ಯಕ್ತಿಗಳು ಪಾಪಿಗಳು. ಅಂತವರಿಂದ ಯಾವುದೇ ದಾನ, ಧರ್ಮ ತೆಗೆದುಕೊಳ್ಳಬಾರದು ಎಂಬುದಿದೆ. ಆದರೆ, ವಕ್ಪ್ ಹೆಸರಿನಲ್ಲಿ ತಮ್ಮದಲ್ಲದ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
10-12 ಶತಮಾನದ ಮಠಮಾನ್ಯಗಳ ಆಸ್ತಿಯೂ ಪಹಣಿಯಲ್ಲಿ ವಕ್ಪ್ ಹೆಸರಿನಲ್ಲಿ ಸೇರಿಸಿದ್ದಾರೆ. ದೇವಸ್ಥಾನ, ಗರಡಿಮನೆ, ಸರ್ಕಾರಿ ಸಂಘದ ಸ್ಥಳಗಳನ್ನು ಸಹ ವಕ್ಪ್ ಆಸ್ತಿ ಎಂದು ನಮೂದು ಮಾಡಿದ್ದಾರೆ ಎಂದರು.
ಇದೆಲ್ಲದರ ವಿರುದ್ಧ ಜನಜಾಗೃತಿ ಹಾಗೂ ಅಧ್ಯಯನಕ್ಕಾಗಿ ಬಿಜೆಪಿ ಮೂರು ತಂಡಗಳಲ್ಲಿ ವಕ್ಪ್ ವಿರುದ್ಧ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು.
ಇದೀಗ ಸಚಿವ ಜಮೀರ್ ಅಹ್ಮದ್ಖಾನ್ ಅವರು ಸೈತಾನರಿಗೆ ವಕ್ಪ್ ಆಸ್ತಿ ಕಾಣಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.
ಬಿಜೆಪಿ ಮುಖಂಡರಾದ ಶಾಸಕರಾದ ಸಿ.ಟಿ. ರವಿ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಬಿ.ಸಿ. ಪಾಟೀಲ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಮುಖ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಸುದ್ದಿಗೋಷ್ಠಿಯಲ್ಲಿ ಇದ್ದರು.