ಎಪಿಎಂಸಿ ಕಾನೂನು ರದ್ದಿನಿಂದ ರೈತರಿಗೆ ಸಂಕಷ್ಟ

WhatsApp Image 2023-07-12 at 8.51.22 PM
Published on

ಮಡಿಕೇರಿ: ರಾಜ್ಯ ಸರ್ಕಾರ ಎಪಿಎಂಸಿ ಕಾನೂನು ರದ್ದುಗೊಳಿಸುವ ಮೂಲಕ ಮತ್ತೊಮ್ಮೆ ರೈತರು ದಲ್ಲಾಳಿಗಳ ಕಪಿಮುಷ್ಠಿಗೆ ಸಿಲುಕುವಂತಾಗಿದೆ ಎಂದು ಬಿಜೆಪಿಯ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಡಾ.ನವೀನಕುಮಾರ್ ಬೇಸರ ವ್ಯಕ್ತಪಡಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮಂಡಿಸಿದ ರೈತ ಪರ ಬಜೆಟ್‌ಗೆ ವ್ಯತಿರಿಕ್ತವಾದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿ ರೈತರ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಕೃಷಿ ಮತ್ತು ಕೃಷಿಗೆ ಪೂರಕವಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ೬೪ ವಿಷಯಗಳ ಪೈಕಿ ಕೇವಲ ೪ ವಿಷಯ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆಂದು ಟೀಕಿಸಿದರು.


ರೈತರು ಬೆಳೆದ ಉತ್ಪನ್ನಗಳನ್ನ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ರೂಪಿಸಿದ್ದ ಎಪಿಎಂಸಿ ಕಾನೂನು ರದ್ದು ಮಾಡಿರುವುದು ಸರಿಯಲ್ಲ. ಕೇವಲ ಎಪಿಎಂಸಿಗಳಲ್ಲಿ ಮಾತ್ರ ಮಾರಾಟ ಮಾಡುವ ಹಳೆಯ ಕಾನೂನು ಜಾರಿಗೆ ತರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ. ಏಕಾಏಕಿ ವಿದ್ಯುತ್ ದರ ಏರಿಕೆಯಿಂದ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬಾರಿ ಹೊಡೆತವುಂಟಾಗಿದೆ. ಗೃಹ ಬಳಕೆಯ ಪ್ರತಿ ಯುನಿಟ್‌ಗೆ ಸರಾಸರಿ ೭೦ ಪೈಸೆ ದರ ಹೆಚ್ಚಳ ಹಾಗೂ ಕನಿಷ್ಠ ದರವನ್ನು ೬೦ ರೂ.ನಿಂದ ೭೦ ರೂ.ಗೆ ಹೆಚ್ಚಳ ಮಾಡಬೇಕಾಗಿದೆ. ಈ ರೀತಿ ಬೇಕಾಬಿಟ್ಟಿ ದರ ಏರಿಕೆ ಮಾಡುವ ಮೂಲಕ ಗೃಹ ಬಳಕೆದಾರರಿಗೆ, ಸಣ್ಣ ಉದ್ಯಮದಾರರಿಗೆ ಪೆಟ್ಟು ನೀಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.


ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಮಾತನಾಡಿ, ಸಿದ್ದರಾಮಯ್ಯ ಮಂಡಿಸಿದ ಬಜೆಟ್ ರೈತರಿಗೆ ಬರೆ ಎಳೆಯುವಂತಿದೆ. ರೈತರ ಮೇಲೆ ದೌರ್ಜನ್ಯ ಮಾಡುವುದರ ಮೂಲಕ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕರಣ ಪ್ರಾರಂಭಿಸಿದೆ ಎಂದು ಟೀಕಿಸಿದರು.


ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಮಾತನಾಡಿ, ಬಜೆಟ್‌ನಲ್ಲಿ ಅನ್ನದಾತರಿಗೆ ಅನ್ಯಾಯ ಆಗಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ರೈತಪರ ಯೋಜನೆಗಳನ್ನ ಕೈಬಿಡಲಾಗಿದೆ ಎಂದು ಟೀಕಿಸಿದರು.


ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಂದಳ್ಳಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net