

ತರೀಕೆರೆ: ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿಯಲ್ಲಿ ಹದಗೆಟ್ಟಿರುವ 3 ಕಿ.ಮೀ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಖುದ್ದಾಗಿ ಪರಿಶೀಲಿಸಿದ ನಂತರ ಸಿಎಂ ಜತೆ ಚರ್ಚಿಸಿ ಬಿಡುಗಡೆ ಮಾಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಪಟ್ಟಣದಲ್ಲಿ ಎಸ್‌ಎಚ್‌ಡಿಪಿ, ಅಪೆಂಡಿಕ್ಸ್-ಸಿ, ಡಲ್ಟ್, ಸಿಎಂ ವಿಶೇಷ ಅನುದಾನ ಅನುದಾನಡಿ 29.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಿ.ಎಚ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸತತವಾಗಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ರಾಜ್ಯದ ಬಹುತೇಕ ರಸ್ತೆಗಳು ಹಾಳಾಗಿದ್ದು, ಇಲಾಖೆಯಿಂದ ಎಲ್ಲ ರಸ್ತೆ ದುರಸ್ತಿ ಕೈಗೊಳ್ಳಲಾಗುವುದು. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡದೇ 224 ಕ್ಷೇತ್ರದ ಶಾಸಕರಿಗೂ ಎಸ್‌ಎಚ್‌ಡಿಪಿ ಯೋಜನೆಯಡಿ ತಲಾ 6 ಕೋಟಿ ರೂ.ಸಮಾನವಾಗಿ ಹಂಚಿಕೆ ಮಾಡಲಾಗಿದೆ. ತರೀಕೆರೆ ಪಟ್ಟಣದಲ್ಲಿ ಹಾದು ಹೋಗಿರುವ 7 ಕಿ.ಮೀ ಉದ್ದದ ಬಿ.ಎಚ್.ರಸ್ತೆ ಪೈಕಿ ಸಧ್ಯ 4ಕಿ.ಮೀ ಮಾತ್ರ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಬಾಕಿ ಉಳಿದ 3 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಚಿಂತನೆ ನಡೆಸಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಹಿಂದೆ ಇದ್ದ ಡಬಲ್ ಇಂಜಿನ್ ಸರ್ಕಾರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಹಿಂದಿನ ಸಂಸದರ ನಿರಾಸಕ್ತಿಯಿಂದ ಎರಡು ದಶಕದ ಕನಸು ಕೈಗೂಡಿರಲಿಲ್ಲ. ಇದೀಗ ರಾಜ್ಯ ಸರ್ಕಾರವೇ ಅಗತ್ಯ ಅನುದಾನ ನೀಡಿ ರಸ್ತೆ ಅಭಿವೃದ್ಧಿಪಡಿಸುವ ಕಾಲ ಕೂಡಿ ಬಂದಿದೆ. ನಾಗರಿಕರ ಒತ್ತಾಸೆಯಂತೆ ಪಟ್ಟಣದ ಕೋಡಿಕ್ಯಾಂಪ್‌ನಿಂದ ತಾಲೂಕು ಕಚೇರಿವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಸುಗಮ ಸಂಚಾರದ ಜತೆ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ ಎಂದರು.
ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ಭದ್ರಾ ಕಾಡಾ ಸಮಿತಿ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಸಿಸಿ ಸದಸ್ಯರಾದ ಜಿ.ನಟರಾಜ್, ಎಚ್.ವಿಶ್ವನಾಥ್, ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಉಪಾಧ್ಯಕ್ಷೆ ಎಂ.ಗಿರಿಜಾ, ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಯಾನಂದ್, ಎಸ್‌ಇ ಬಿ.ಜಗದೀಶ್, ಇಇ ಶ್ರೀಧರ್, ಎಇಇ ಜಿ.ನಾಗೇಂದ್ರಪ್ಪ ಮತ್ತಿತರರಿದ್ದರು.