

ಸಂಕೇಶ್ವರ: ಅಲ್ಪಸಂಖ್ಯಾತರ ಇಲಾಖೆಯ ಅನುದಾನದಲ್ಲಿ ೩ ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುತ್ತಿದ್ದು, ಅಲ್ಪಸಂಖ್ಯಾತರು ಮುಂದೆ ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಪಟ್ಟಣದ ಸರ್ಕಾರಿ ನಿರೀಕ್ಷಣಾ ಮಂದಿರದ ಸುತ್ತಲಿನ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ೨.೧ಕಿಮೀ ಉದ್ದದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸತತ ಮಳೆಯಿಂದ ರಸ್ತೆಗಳು ಹಾಳಾಗುತ್ತಿದ್ದು, ಮಳೆ ಕಡಿಮೆಯಾದ ತಕ್ಷಣ ಪುರಸಭೆ ಸದಸ್ಯರೊಂದಿಗೆ ರಸ್ತೆಗಳ ದುರಸ್ತಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಕಣಗಲಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಅಪಘಾತ ಸಂದರ್ಭಗಳಲ್ಲಿ ತುರ್ತು ಸೇವೆ ಸಲ್ಲಿಸಲು ಅನುಕೂಲವಾಗುವಂತೆ ೧೦೦ ಹಾಸಿಗೆಯ ಸುಸಜ್ಜಿತ ಟ್ರಾಮಾ ಸೆಂಟರ್ ಆಗಿ ಪರಿವರ್ತಿಸಲು ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಸದಸ್ಯರಾದ ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಗಜಾನನ ಕ್ವಳ್ಳಿ, ಕಲಗೌಡ ಪಾಟೀಲ, ಮಹಾದೇವ ಕ್ಷಿರಸಾಗರ, ಚಿದಾನಂದ ಕರದನ್ನವರ, ಗಂಗಾರಾಮ ಭೂಸಗೋಳ, ಪ್ರಶಾಂತ ಪಾಟೀಲ, ರೋಹನ್ ನೇಸರಿ ಇತರರಿದ್ದರು.