

ತುಮಕೂರು: ವಿವಿ ಆವರಣದಲ್ಲಿ ನಿರ್ವಹಣೆ ಇಲ್ಲದೆ ಹಾಳಾಗಿದ್ದ ಟೆನಿಸ್ ಕೋರ್ಟ್ಗೆ ಮರುಜೀವ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ 75 ಲಕ್ಷ ರೂ., ವೆಚ್ಚದಲ್ಲಿ ಟೆನಿಸ್ ಕ್ರೀಡಾಂಗಣ ಹಾಗೂ ಆಟಗಾರರ ಕೊಠಡಿ ನವೀಕರಣ ಕಾಮಗಾರಿಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಟೆನಿಸ್ ಕೋರ್ಟ್ ನವೀಕರಣ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಉದ್ಘಾಟನೆ ಸಂದರ್ಭದಲ್ಲಿ ಎಟಿಪಿ ಟೂರ್ನಿ ಆಯೋಜಿಸುವ ಭರವಸೆಯಿತ್ತರು. 2003ರಲ್ಲಿ ಎಟಿಪಿ ರ್ಯಾಂಕ್ ಟೆನಿಸ್ ಟೂರ್ನಮೆಂಟ್ ಆಯೋಜಿಸಲು ಮನವಿ ಬಂದ ಹಿನ್ನೆಲೆ ಈ ಜಾಗವನ್ನು ಗುರುತಿಸಿ, ಎರಡೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಟೆನಿಸ್ ಅಂಕಣಗಳನ್ನು ನಿರ್ಮಿಸಲಾಯಿತು. ಅಂದಿನ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಕ್ರೀಡಾಪಟುಗಳು ಭಾಗವಹಿಸಿದ್ದರು. ತದನಂತರ ಇದರ ನಿರ್ವಹಣೆ ಹೊಣೆಯನ್ನು ತುಮಕೂರು ಟೆನಿಸ್ ಅಸೋಸಿಯೇಷನ್ಗೆ ವಹಿಸಲಾಯಿತು. ಕೆಲವು ದಿನ ನಿರ್ವಹಣೆ ಮಾಡಲಾಯಿತಾದರೂ ಸಂಪನ್ಮೂಲ ಕೊರತೆಯಿಂದ ಕೈಚೆಲ್ಲಿದರು. ಆ ನಂತರ ಟೆನಿಸ್ ಅಂಕಣದ ರ್ಟ್ ಕಿತ್ತುಬರಲಾರಂಭವಾಯಿತು. ಈಗ ಕೋರ್ಟ್ಗೆ ಮರುಜೀವ ನೀಡಲಾಗುವುದು ಎಂದರು.
ರಾಜ್ಯಮಟ್ಟದ ಕ್ರೀಡಾಕೂಟ: ಅಂರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ತುಮಕೂರಿನಲ್ಲಿದ್ದು ಈ ಬಾರಿ ರಾಜ್ಯಮಟ್ಟದ ಕ್ರೀಡಾಕೂಟದ ಆತಿಥ್ಯವಹಿಸುವ ಅವಕಾಶ ಒದಗಿಬಂದಿದೆ. ಅಥ್ಲೆಟಿಕ್ಸ್, ಬ್ಯಾಸ್ಕೆಟ್ಬಾಲ್, ಜಿಮ್ನಾಸ್ಟಿಕ್ಸ್, ಈಜು, ಶಟಲ್ ಬ್ಯಾಡ್ಮಿಂಟನ್ ಸೇರಿದಂತೆ ಎಲ್ಲ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗುವುದು ಎಂದು ಪರಮೇಶ್ವರ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ, ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.