ಕಬಿನಿ ಅಣೆಕಟ್ಟೆಯ ದುರಸ್ತಿ ಕಾರ್ಯ ಶೀಘ್ರ

H.D.KOTE-Cong-Anil chikkamadu-MLA (3)
Published on

ಮೈಸೂರು: ಕಬಿನಿ ಅಣೆಕಟ್ಟೆ ದುರಸ್ತಿ ಕಾರ್ಯ ಶೀಘ್ರದಲ್ಲೇ ನಡೆಯಲಿದೆ ಎಂದು ಅರಣ್ಯ ವಸತಿ, ವಿಹಾರಧಾಮಗಳ ನಿಗಮದ ಅಧ್ಯಕ್ಷರೂ ಆದ ಶಾಸಕ ಅನಿಲ್‌ಚಿಕ್ಕಮಾದು ಹೇಳಿದರು.


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬಿನಿ ಅಣೆಕಟ್ಟೆಯಲ್ಲಿ ಬಿರುಕು ಉಂಟಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕಬಿನಿ ಅಣೆಕಟ್ಟು ದುರಸ್ತಿ ಕಾರ್ಯ ಮಾಡಲಾಗುತ್ತದೆ. ಈ ಬಗ್ಗೆ ಜಲ ಸಂಪನ್ಮೂಲ ಸಚಿವರು ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಈ ಕೆಲಸ ಆರಂಭವಾಗಲಿದೆ ಎಂದರು.


ಕೆಆರ್‌ಎಸ್ ಅಣೆಕಟ್ಟೆ ಮಾದರಿಯಲ್ಲೇ ಕಬಿನಿ ಅಣೆಕಟ್ಟೆ ಬಳಿ ಉದ್ಯಾನ ನಿರ್ಮಿಸಲಾಗುವುದು. ಇದಕ್ಕೆ 30 ಕೋಟಿ ರೂ. ಅಂದಾಜು ಪಟ್ಟಿ ಸಿದ್ಧ ಪಡಿಸಲಾಗಿದೆ. ಅಣೆಕಟ್ಟೆ ಅಭಿವೃದ್ಧಿಯು ಎಚ್.ಡಿ.ಕೋಟೆ ತಾಲೂಕು ಪ್ರವಾಸೋದ್ಯಮಕ್ಕೂ ಪೂರಕವಾಗಿದೆ ಎಂದರು.


ಎಚ್.ಡಿ.ಕೋಟೆ ತಾಲೂಕಿನಲ್ಲಿ ಮೂರು ಜಲಾಶಯ, ಅಭಯಾರಣ್ಯ, ಪ್ರಾಕೃತಿಕ ಸಂಪತ್ತು ಅಪಾರವಾಗಿದೆ. ಆದ್ದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.


ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇವೆ. 40 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿದ್ದಾರೆ. ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಅವರಿಗೆ ಹೈಕಮಾಂಡ್ ಸೇರಿದಂತೆ ಎಲ್ಲ ಹಿರಿಯ ನಾಯಕರೂ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net