

ಯಲಬುರ್ಗಾ: ಪಟ್ಟಣದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಶಿಥಿಲಗೊಂಡಿದ್ದು, ಸಿಬ್ಬಂದಿ ಭೀತಿಯಲ್ಲಿ ಕೆಲಸ ನಿರ್ವಹಿಸುವಂತಾಗಿದೆ.
ಇದನ್ನೂ ಓದಿ: http://ದುರಸ್ತಿ ಕಾಣದ ತೋಟಗಾರಿಕೆ ನಿರ್ದೇಶಕರ ಕಚೇರಿ
35 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಮಳೆಗಾಲದಲ್ಲಿ ಛಾವಣಿ ಸೋರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಕುಳಿತು ಕೆಲಸ ಮಾಡಲು ತೊಂದರೆಯಾಗುತ್ತಿದೆ. ಛಾವಣಿ ತೇವಾಂಶದಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡ, ಕಡತ ರಕ್ಷಣೆ ಸವಾಲಾಗಿದೆ.
ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು, ಇದರಿಂದ ಮಳೆನೀರು ಕಚೇರಿ ಒಳಗೆ ಬರುತ್ತಿದೆ. ಛಾವಣಿ ಸಿಮೆಂಟ್ ಉದುರುತ್ತಿದ್ದು, ಕಬ್ಬಿಣದ ಸರಳುಗಳು ಹೊರಚಾಚಿವೆ. ಕೆಲಸದ ವೇಳೆ ಸಿಬ್ಬಂದಿ ಮೇಲೆ ಸಿಮೆಂಟ್ ಉದುರುವುದರಿಂದ ಭಯದಲ್ಲಿ ಕೆಲಸ ಮಾಡುವಂತಾಗಿದೆ. ಕೆಲಸಕ್ಕಾಗಿ ಆಗಮಿಸುವ ರೈತರು, ಸಾರ್ವಜನಿಕರು ಕೂಡ ಕಚೇರಿ ಸ್ಥಿತಿ ಕಂಡು ಭಯಪಡುತ್ತಿದ್ದಾರೆ.
ಸರ್ಕಾರಿ ಯೋಜನೆಗಳನ್ನು ಜನರಿಗೆ ಸಕಾಲಕ್ಕೆ ತಲುಪಿಸಲು ಮತ್ತು ಅಗತ್ಯ ಮಾಹಿತಿ ನೀಡಲು ಸುಸಜ್ಜಿತ ಕಚೇರಿ ಇರಬೇಕು. ಜತೆಗೆ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡಲು ಒಳ್ಳೆಯ ವಾತಾವರಣ ಬೇಕು. ತೋಟಗಾರಿಕೆ ಇಲಾಖೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಕಚೇರಿಯಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ.
ಅತಿಯಾದ ತೇವಾಂಶದಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡ ನಡೆದಿದೆ. ಶಿಥಿಲಗೊಂಡ ಕಟ್ಟಡದ ಕುರಿತು ಇಲಾಖೆ ಸಿಬ್ಬಂದಿ ಹಾಗೂ ರೈತರು ಸಂಬಂಧಿಸಿದ ಜನಪ್ರತಿನಿಧಿ ಮತ್ತು ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಶಿಥಿಲ ಕಟ್ಟಡದಲ್ಲಿ ಇಲಾಖೆ ಕಾರ್ಯ ನಡೆಯುತ್ತಿದ್ದು, ಅಂಗೈಯಲ್ಲಿ ಜೀವ ಹಿಡಿದು ಕೆಲಸ ಮಾಡಲಾಗುತ್ತಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು, ರೈತರು ಒತ್ತಾಯಿಸಿದ್ದಾರೆ.
ಪಿಆರ್‌ಇಡಿ ಶಾಖಾಧಿಕಾರಿ ಪರಿಶೀಲನೆ
ತೋಟಗಾರಿಕೆ ಇಲಾಖೆ ಕಟ್ಟಡ ದುರಸ್ತಿಗೊಳಿಸಲು ಪಿಆರ್‌ಇಡಿ ಉಪ-ವಿಭಾಗಕ್ಕೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಪತ್ರ ಬರೆಯಲಾಗಿದೆ. ಕಟ್ಟಡದ ಸ್ಥಿತಿಗತಿ ಕುರಿತು ಪಿಆರ್‌ಇಡಿ ಶಾಖಾಧಿಕಾರಿ ಮೇ 30ರಂದು ಪರಿಶೀಲನೆ ನಡೆಸಿದ್ದು, ಶಿಥಿಲ ಕಟ್ಟಡ ನೆಲಸಮಗೊಳಿಸಲು ಅನುಮತಿ ನೀಡುವಂತೆ ಪಿಆರ್‌ಇಡಿ ಎಇಇ ಜೂ.13ರಂದು ಪಿಆರ್‌ಇಡಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಅಧಿಕಾರಿ, ಸಿಬ್ಬಂದಿ ಭಯದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಕಟ್ಟಡ ದುರಸ್ತಿಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪಿಆರ್‌ಇಡಿ ಉಪ-ವಿಭಾಗದಿಂದ ಪರಿಶೀಲನೆ ನಡೆಸಲಾಗಿದ್ದು, ಕಟ್ಟಡ ನೆಲಸಮಗೊಳಿಸುವ ಕುರಿತು ವರದಿ ನೀಡಿದ್ದಾರೆ.ಮಂಜುನಾಥ ಲಿಂಗಣ್ಣವರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಯಲಬುರ್ಗಾ