ಮೂರ್ನಾಡು-ನಾಪೋಕ್ಲು ರಸ್ತೆ ತಿಂಗಳೊಳಗೆ ದುರಸ್ತಿಪಡಿಸಿ

31adarshkdga3
Published on

ಮಡಿಕೇರಿ: ಮೂರ್ನಾಡು-ನಾಪೋಕ್ಲು ರಸ್ತೆಯನ್ನು ಒಂದು ತಿಂಗಳೊಳಗೆ ದುರಸ್ತಿ ಪಡಿಸಬೇಕೆಂದು ಆಗ್ರಹಿಸಿ ಕುಂಬಳದಾಳು ಗ್ರಾಮಸ್ಥರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ತೆಕ್ಕಡೆ ಗಣಪತಿ, ಮೂರ್ನಾಡು, ಕುಂಬಳದಾಳು, ಕೊಟ್ಟಮುಡಿ ನಾಪೋಕ್ಲು ರಸ್ತೆಯ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿದೆ. ಆದರೂ ಜಿಲ್ಲಾಧಿಕಾರಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೂರ್ನಾಡು ಪಟ್ಟಣದಿಂದ ಕುಂಬಳದಾಳುವಿನಿಂದ ನಾಪೋಕ್ಲುವಿಗೆ ಹೋಗುವ ರಸ್ತೆ ತುಂಬಾ ಕಿರಿದಾಗಿದೆ. ವಾಹನ ಸಂಚಾರಕ್ಕೂ ಯೋಗ್ಯವಾಗಿಲ್ಲ. ಆದ್ದರಿಂದ ಈ ರಸ್ತೆಗೆ ಎರಡೂ ಕಡೆ ಅಡಚಣೆಯಾಗಿರುವ ಶಿಥಿಲಾವಸ್ಥೆಯಲ್ಲಿರುವ ಮಿಲ್ ಕಟ್ಟಡ ಹಾಗೂ ಹೋಟೆಲ್‌ಗಳನ್ನು ತೆರವುಗೊಳಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ತೆಕ್ಕಡೆ ಸುನಂದಾ ಮಾತನಾಡಿ, ಶೀಘ್ರದಲ್ಲಿಯೇ ಜಿಲ್ಲಾಧಿಕಾರಿ ಇದರ ಬಗ್ಗೆ ಪರಿಶೀಲನೆ ನಡೆಸಬೇಕು. ವಿಶೇಷ ಭೂ ಸ್ವಾಧೀನ ಕಾಯ್ದೆ ಪ್ರಕಾರ ರಸ್ತೆಗೆ ಅವಶ್ಯವಿರುವ ಸ್ಥಳವನ್ನು ವಶಪಡಿಸಿಕೊಂಡು ಕಟ್ಟಡಗಳನ್ನು ನೆಲಸಮ ಮಾಡುವುದರ ಮೂಲಕ ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.

2018ನೇ ಸಾಲಿನಲ್ಲಿ ರಸ್ತೆ ವಿಸ್ತರಣೆಗಾಗಿ ಮೈಸೂರು-ಕೊಡಗು ಸಂಸದರು ಭೂಮಿಪೂಜೆ ನೆರವೇರಿಸಿದ್ದರು. ಆದರೂ ಕಾಮಗಾರಿಯಲ್ಲಿ ಪ್ರಗತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ ಮಾರ್ಚ್‌ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕುಂಬಳದಾಳು ರಸ್ತೆಯ ಎರಡೂ ಬದಿಯಲ್ಲಿ ನಾಲ್ಕು ಅಡಿ ಅಗಲ ಮೂರು ಅಡಿ ಆಳದ ಗುಂಡಿ ತೋಡಿ ರಸ್ತೆಯನ್ನು ಹಾಳುಮಾಡಲಾಗಿದೆ ಎಂದು ದೂರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ದುರಸ್ತಿ ಮಾಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪೂರ್ಣೇಶ, ಮಹೇಶ, ಸುಗು, ದಂಬೆಕೋಡಿ ಸುಬ್ರಮಣಿ, ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net