ಆಂಬುಲೆನ್ಸ್ ಕೂಡಲೇ ದುರಸ್ತಿಪಡಿಸಿ

IMG20241122155701
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಸಿಮೆಂಟ್ ಮಂಜು ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.
Published on

ಆಲೂರು: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯನ್ನು ಕರೆದೊಯ್ಯುವ 108 ಆಂಬುಲೆನ್ಸ್‌ಅನ್ನು ತಕ್ಷಣ ದುರಸ್ತಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುಬೇಕು ಎಂದು ಶಾಸಕ ಸಿಮೆಂಟ್ ಮಂಜು ತಾಲೂಕು ಆರೋಗ್ಯಾಧಿಕಾರಿ ಹಾಗೂ ತಾಲೂಕು ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ಆಸ್ಪತ್ರೆಯಲ್ಲಿರುವ ಎರಡು ಆಂಬುಲೆನ್ಸ್ ಪೈಕಿ ಒಂದು ಆಂಬುಲೆನ್ಸ್ ಕೆಟ್ಟು ಹಲವು ದಿನಗಳಾಗಿವೆ. ಈವರೆಗೂ ದುರಸ್ತಿ ಮಾಡಿಸಿಲ್ಲ. ದುರಂತವೆಂದರೆ ಅಪಘಾತಗಳಾದಾಗ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಇರುವ ಒಂದೇ ಆಂಬ್ಯುಲೆನ್ಸ್‌ನಲ್ಲಿ ಜನರಿಗೆ ಸೇವೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಿಪೇರಿ ಮಾಡಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೆಡಿಪಿ ಸಮಿತಿ ನಾಮನಿರ್ದೇಶಿತ ಸದಸ್ಯ ಶಿವಣ್ಣ ಮಾತನಾಡಿ, ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಜನಸಂಖ್ಯೆ ಇದೆ. ಆದರೆ ಕೇವಲ ಇಬ್ಬರು ಆಶಾ ಕಾರ್ಯಕರ್ತರು ಕಾರ್ಯನಿರ್ವಸುತ್ತಿದ್ದಾರೆ. ಪ್ರತಿ ಒಂದು ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತರನ್ನು ನೇಮಕ ಮಾಡಿ, ಜನಸಾಮಾನ್ಯರ ಆರೋಗ್ಯದ ಬಗ್ಗೆ ನಿಗಾವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತೀಮಾ, ಹೊಸ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ಬೇಕು ಎಂದು ತಿಳಿಸಿದರು. ಶಾಸಕ ಸಿಮೆಂಟ್ ಮಂಜು ಈ ಬಗ್ಗೆ ಸರ್ಕಾರದೊಡನೆ ಚರ್ಚಿಸಿ ಅನುಮತಿ ನೀಡುವಂತೆ ಪ್ರಯತ್ನಿಸುತ್ತೇನೆ. ಆಸ್ಪತ್ರೆಗಳಲ್ಲಿ ಸಮಸ್ಯೆ ಇದ್ದರೆ ತನ್ನ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೀತಾರಾಮಯ್ಯ ಸಭೆಯಲ್ಲಿ ಮಾತನಾಡಿ, ಆಲೂರು ತಾಲೂಕಿನಲ್ಲಿ ಒಟ್ಟು 12 ಪಶು ಆಸ್ಪತ್ರೆಗಳಿವೆ. 52 ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಆದರೆ ಸಿಬ್ಬಂದಿ ಕೊರತೆಯಿಂದ 15 ಜನ ಸರ್ಕಾರಿ ನೌಕರರು, ಐದು ಜನ ಹೊರಗುತ್ತಿಗೆಯ ನೌಕರರು ಸೇರಿ ಒಟ್ಟು 20 ಜನರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು 32 ಸಿಬ್ಬಂದಿ ಅವಶ್ಯಕತೆ ಇದೆ. ತಾಲೂಕಿನ ಐದು ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರೇ ಇಲ್ಲವಾಗಿದೆ ಎಂದು ಮಾಹಿತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಸರ್ಕಾರ ಅಕ್ಷರ ದಾಸೋಹ ಸಿಬ್ಬಂದಿಗೆ ನೀಡುತ್ತಿರುವ ಗೌರವಧನ ಕಡಿಮೆಯಾಗಿರುವುದರಿಂದ ಮಲೆನಾಡು ಭಾಗದಲ್ಲಿ ಕೆಲವರು ಕೆಲಸ ಬಿಟ್ಟು ಹೋಗಿದ್ದಾರೆ. ಇದರಿಂದ ಶಾಲೆಗಳಲ್ಲಿ ಶೌಚಗೃಹ ಸ್ವಚ್ಛತೆ ನಿರ್ವಹಣೆ ಬಹಳ ಕಷ್ಟಕರವಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳ ಶೌಚಗೃಹ ಶುಚಿತ್ವ ಕಾಪಾಡಲು ಏಜೆನ್ಸಿ ಮೂಲಕ ಕೆಲಸ ಮಾಡಿಸಿದರೆ ಪಾಠ ಪ್ರವಚನಗಳಿಗೆ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಶೇ. 103 ರಷ್ಟು ಬಿತ್ತನೆಯಾಗಿದೆ, 1,060 ಮಿಲಿ ಮೀಟರ್ ಮಳೆ ಆಗಬೇಕಿತ್ತು. ಆದರೆ 1,600 ಮಿ.ಮೀ.ನಷ್ಟು ಅಂದರೆ ಶೇ.45ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ 2000 ರೂ. ಗಳಂತೆ 1,663 ಜನರಿಗೆ 18ನೇ ಕಂತಿನ ಹಣ ಪಾವತಿಯಾಗಿದೆ. ಕೃಷಿಭಾಗ್ಯ ಯೋಜನೆಯಡು ತಾಲೂಕಿನ 50 ಕುಟುಂಬಗಳಿಗೆ ಜಮೀನಿನಲ್ಲಿ ವಿವಿಧ ಕಾರ್ಯ ನಿರ್ವಹಿಸಲು ಅವಕಾಶವಿದೆ. ಅರ್ಹ ಫಲಾನುಭವಿಗಳು ಆಯಾ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವಂತೆ ಮಾಹಿತಿ ನೀಡಿದರು.

ತಹಸೀಲ್ದಾರ್ ನಂದಕುಮಾರ್, ತಾಪಂ ಇಒ ಶ್ರೀನಿವಾಸ್, ನಾಮ ನಿರ್ದೇಶನ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net