ಜು.15ರೊಳಗೆ ಶಾಲಾ ಕೊಠಡಿಗಳ ದುರಸ್ತಿಯಾಗಲಿ

6 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಳೆಗಾಲದಲ್ಲಿ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಮಕ್ಕಳ ಪಾಠಕ್ಕೆ ತೊಂದರೆ ಉಂಟಾದರೆ ಆಯಾ ತಾಲೂಕಿನ ಬಿಇಒ, ಡಿಡಿಪಿಐ ಜವಾಬ್ದಾರರು. ಕ್ಷೇತ್ರಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ನೀಡಿ ವಾಸ್ತವ ವರದಿ ಪಡೆದು ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಲಾ ಕಟ್ಟಡಗಳ ಕಾಮಗಾರಿ ಹಾಗೂ ಕೊಠಡಿಗಳ ದುರಸ್ತಿ ಕುರಿತು ಶಿಕ್ಷಣ ಇಲಾಖೆ ಹಾಗೂ ವಿವಿಧ ಅನುಷ್ಠಾನ ಏಜೆನ್ಸಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಹವಾಮಾನ ಇಲಾಖೆ ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಈ ಕುರಿತು ಇಂದೇ ಕ್ರಿಯಾ ಯೋಜನೆ ರೂಪಿಸಿ. ಜು. 15ರೊಳಗೆ ಸೋರಿಕೆ ಆಗುವ ಮತ್ತು ಶಿಥಿಲಾವಸ್ಥೆಯ ಮಾಳಿಗೆ, ಗೋಡೆಗಳನ್ನು ದುರಸ್ತಿಗೊಳಿಸಿ ವರದಿ ಸಲ್ಲಿಸಲು ಸೂಚಿಸಿದರು.

ಶಾಲೆ ಸೋರಿಕೆ ಅಥವಾ ಶಿಥಿಲ ಕಟ್ಟಡದಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಸಕ್ತ ಸಾಲಿಗೆ ದುರಸ್ತಿಗೆ ಜಿಲ್ಲೆಯ 147 ಶಾಲೆಗಳ 495 ಕೊಠಡಿ ಗುರುತಿಸಲಾಗಿದೆ. ತಕ್ಷಣವೇ ಕ್ರಮವಹಿಸಿ 62 ಶಾಲೆಗಳ 262 ಕೊಠಡಿಗಳನ್ನು ದುರಸ್ತಿಗೊಳಿಸಬೇಕಿದೆ ಎಂದರು.

ಪ್ರತಿ ಶಾಲೆಗೆ ಅಗತ್ಯ ಶೌಚಗೃಹ, ಆಟದ ಮೈದಾನ, ಗ್ರಂಥಾಲಯ ಹಾಗೂ ಇತರ ಸೌಲಭ್ಯ ಪಡೆಯಲು ಸೂಕ್ತ ಮತ್ತು ವಿವರವಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಹಲವು ಕಂಪನಿಗಳ ಸಿಎಸ್​ಆರ್​ ಅನುದಾನದಲ್ಲಿ ಜಿಲ್ಲೆಯ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿನ ಶಾಲೆಗಳನ್ನು ಮಾದರಿ ಶಾಲೆಗಳಾಗಿ ರೂಪಿಸಲು ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕು ಎಂದರು.

ಡಿಡಿಪಿಐ ಎಸ್​.ಎಸ್​. ಕೆಳದಿಮಠ ಮಾತನಾಡಿ, ಪ್ರಸಕ್ತ ವರ್ಷ 147 ಶಾಲೆಗಳ 495 ಕೊಠಡಿಗಳ ದುರಸ್ತಿಗೆ ಗುರುತಿಸಲಾಗಿದೆ. ಅಗತ್ಯ ಕ್ರಿಯಾಯೋಜನೆ, ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಪಂ ಉಪ ಕಾರ್ಯದರ್ಶಿ ಬಿ.ಎಸ್​.ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ವಿಜಯಕುಮಾರ, ಆರ್​.ಎಂ.ಸೊಪ್ಪಿಮಠ, ಸುಜಾತಾ ಕಾಳೆ, ಶಿವಕುಮಾರ ಪಾಟೀಲ, ಉಮೇಶ ಬೊಮ್ಮಕ್ಕನವರ, ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಶಿವಾನಂದ ಮಲ್ಲಾಡ, ಮಹಾದೇವಿ ಮಾಡಲಗಿ, ಉಮಾದೇವಿ ಬಸಾಪುರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net