

ವಿಜಯವಾಣಿ ಸುದ್ದಿಜಾಲ ತಿಪಟೂರು
ವಾಹನ ಸಂಚಾರಕ್ಕೆ ಅಡಚಣೆ ಮತ್ತು ರಸ್ತೆ ಅಪಘಾತಗಳಿಗೆ ಕಾರಣವಾಗಿದ್ದ ಗುಂಡಿಬಿದ್ದ ರಸ್ತೆಯನ್ನು ನೊಣವಿನಕೆರೆ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ದುರಸ್ತಿ ಮಾಡಿ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಆಲ್ಬೂರು ಬಸ್ ನಿಲ್ದಾಣದ ಬಳಿ ಹಾದು ಹೋಗಿರುವ ಹಿರಿಸಾವೆ- ನೊಣವಿನಕೆರೆ ಮುಖ್ಯರಸ್ತೆ ಗುಂಡಿಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಗತ್ಯ ಕ್ರಮವಹಿಸದ ಕಾರಣ ಮಳೆ ನೀರು ರಸ್ತೆಯಲ್ಲಿಯೇ ಸಂಗ್ರಹವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮಳೆ ಬಂದರೆ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಯಾವುದು ಗುಂಡಿ ಯಾವುದು ಎಂದು ತಿಳಿಯದೇ ಅವಡಗಳಿಗೆ ಕಾರಣವಾಗಿತ್ತು. ಮಂಗಳ ವಾರ ಬೆಳಗ್ಗೆಯಿಂದ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ಮುಖ್ಯ ರಸ್ತೆಯಲ್ಲಿನ ಗುಂಡಿಗಳಲ್ಲಿ ಮಳೆ ನೀರು ಶೇಖರವಾಗಿದ್ದನ್ನು ಗಮನಿಸದೇ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರೂ ಗುಂಡಿಗೆ ಇಳಿದು ಗಾಯಗೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಪಿಡಬ್ಲ್ಯು ಇಲಾಖೆಯನ್ನು ನೆಚ್ಚಿಕೊಳ್ಳದೇ ಜೆಸಿಬಿ ಯಂತ್ರ ಹಾಗೂ ತಾವೇ ಗುದ್ದಲ್ಲಿ ಹಿಡಿದು ರಸ್ತೆಮಧ್ಯೆ ನಿಲ್ಲುತ್ತಿದ್ದ ನೀರನ್ನು ತೆರವುಗೊಳಿಸಿ ಸಂಚಾರ ಮುಕ್ತ ಮಾಡಿದ್ದಾರೆ.
ತುರುವೇಕೆರೆ ವಿಭಾಗಕ್ಕೆ ಬರುವ ಹಿರಿಸಾವೆ- ನೊಣವಿನಕೆರೆ ರಸ್ತೆಯದ್ದು, ಮೊದಲಿನಿಂದಲೂ ಸಮಸ್ಯೆ ಇದೆ. ಈ ಹಿಂದೆ ಎಸ್ಎಚ್ಜಿಪಿ ಯೋಜನೆಯಡಿ ರಸ್ತೆ ಕಾಮಗಾರಿ ನಡೆದಾಗ ಈ ರಸ್ತೆಯನ್ನೂ ಸೇರಿಸಿಕೊಂಡಿದ್ದರೆ ಸಮಸ್ಯೆ ಇರುತ್ತಿರಲಿಲ್ಲ.| ದಯಾನಂದ್ ಎಇಇ, ಪಿಡಬ್ಲ್ಯುಡಿ