

ಬಾಳೆಹೊನ್ನೂರು: ಹೊಂಡ ಗುಂಡಿ ಬಿದ್ದು ಹದಗೆಟ್ಟಿದ್ದ ಕರ್ಕೇಶ್ವರ ಕೈಮರದಿಂದ ಗುಬ್ಬೂರು ಗ್ರಾಮಕ್ಕೆ ತೆರಳುವ ರಸ್ತೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಹಣ ಹಾಕಿ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.
ಕೈಮರದಿಂದ ಗುಬ್ಬೂರು ಗ್ರಾಮಕ್ಕೆ ತೆರಳುವ ರಸ್ತೆ ಹಲವು ವರ್ಷಗಳಿಂದ ಹೊಂಡ ಗುಂಡಿಗಳಿಂದ ಕೂಡಿದ್ದು, ಡಾಂಬರೀಕರಣ ಮಾಡಿ ದುರಸ್ತಿ ಮಾಡಿಕೊಡುವಂತೆ ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ರಸ್ತೆ ದುರಸ್ತಿ ಮಾಡಿರಲಿಲ್ಲ. ರಸ್ತೆ ಹದಗೆಟ್ಟಿ ಕಾರಣ ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ತಮ್ಮ ಸ್ವಂತ ಹಣ ಬಳಸಿಕೊಂಡು ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಮೂಲಕ ಜನ, ವಾಹನ ಸಂಚಾರಕ್ಕೆ ಸುಗಮ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸ್ಥಳೀಯ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರ ಆಡಳಿತ, ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು, ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರವಿದ್ದರೂ ರಸ್ತೆ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ರಸ್ತೆ ಸರಿಪಡಿಸಿಕೊಂಡಿದ್ದಾರೆ.
ಅದಲ್ಲದೇ ಈ ಹಿಂದೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಮಾಜಿ ಶಾಸಕ ಜೀವರಾಜ್ ಬಿಡುತ್ತಿಲ್ಲ ಎಂದು ಶಾಸಕರು ಆರೋಪಿಸುತ್ತಿದ್ದರು. ಆದರೆ ಇದೀಗ ಅಂತಹ ಪರಿಸ್ಥಿತಿಯಿಲ್ಲ. ಆದರೂ ಏಕೆ ರಸ್ತೆ ದುರಸ್ತಿ ಮಾಡಿಲ್ಲ ಎಂಬುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಗುಬ್ಬೂರು ರಸ್ತೆ ಈ ಹಿಂದೆ ಡಿ.ಬಿ.ಚಂದ್ರೇಗೌಡರ ಅವಧಿಯಲ್ಲಿ ಡಾಂಬರೀಕರಣಗೊಂಡಿತ್ತು. ಆ ಬಳಿಕ ಆ ರಸ್ತೆಗೆ ಡಾಂಬರೀಕರಣವಾಗಿಲ್ಲ. ಹಲವು ವರ್ಷವಾದ ಕಾರಣ ರಸ್ತೆ ಹದಗೆಟ್ಟಿರುವುದು ನಿಜ. ರಸ್ತೆ ಹದಗೆಟ್ಟಿರುವ ಕಾರಣ ಗ್ರಾಮಸ್ಥರು ಒಗ್ಗೂಡಿ ಮಣ್ಣು ಹಾಕಿ ದುರಸ್ತಿ ಮಾಡಿಸಿಕೊಂಡಿದ್ದಾರೆ. ನಾನು ಸಹ ಟ್ರಾೃಕ್ಟರ್ ಕಳುಹಿಸಿ ಮಣ್ಣು ಹಾಕಿಸಲು ವ್ಯವಸ್ಥೆ ಮಾಡಿದ್ದೇನೆ. ಆದರೆ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸ್ಥಳೀಯ ಗ್ರಾಪಂ, ಶಾಸಕರು, ಸರ್ಕಾರದ ಬಗ್ಗೆ ರಸ್ತೆ ದುರಸ್ತಿ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ಹಿಂದೆ ಎಂಎಡಿಬಿಯಲ್ಲಿಯೂ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಸರ್ಕಾರ ಬದಲಾದಾಗ ಅನುದಾನ ಬಿಡುಗಡೆಗೊಂಡಿಲ್ಲ.