

ಕುಂದಾಪುರ: ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಹೇರಿಕುದ್ರು, ತಲ್ಲೂರು ಮಧ್ಯ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಹೇರಿಕುದ್ರು-ತಲ್ಲೂರು ಹಳೇ ಸೇತುವೆ ತಡೆಗೋಡೆ, ಫುಟ್ಪಾತ್ ದುರಸ್ತಿ ಕಾರ್ಯ ಆರಂಭಗೊಂಡಿದೆ. ಹಳೇ ಸೇತುವೆ ತಡೆಗೋಡೆ, ಫುಟ್ಪಾತ್ ಅನೇಕ ಸಮಯದಿಂದ ಜರ್ಜರಿತಗೊಂಡಿತ್ತು.
ಈ ಸೇತುವೆ ಅಲ್ಲಲ್ಲಿ ತಡೆಗೋಡೆಗೆ ಹಾನಿಯಾಗಿದ್ದಲ್ಲದೆ, ಸೇತುವೆ ಗಾರ್ಡ್ ಕಿತ್ತು ಹೋಗಿತ್ತು. ಇನ್ನು ಸೇತುವೆ ಫುಟ್ಪಾತ್ನ 3 ಕಡೆಗಳಲ್ಲಿ ಕುಸಿದ ರೀತಿಯಿದ್ದು, ಅಪಾಯಕಾರಿಯಾಗಿದೆ. ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಸೇತುವೆ ಒಂದು ಬದಿಯಲ್ಲಿ ಮಾತ್ರ ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದ್ದು, ಹಂತ-ಹಂತವಾಗಿ ಹೊಸ ತಡೆಗೋಡೆ, ಫುಟ್ಪಾತ್ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಪ್ರತಿನಿತ್ಯ ಬೈಕ್, ಕಾರು, ರಿಕ್ಷಾದಂತಹ ವಾಹನಗಳಿಂದ ಹಿಡಿದು, ಬಸ್, ಸರಕು ಸಾಗಾಟದ ಘನ ವಾಹನ ಸಂಚರಿಸುತ್ತಿರುತ್ತವೆ. ತಡೆಗೋಡೆಗೆ ಹಾನಿಯಾಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿತ್ತು.
ಹೇರಿಕುದ್ರು, ತಲ್ಲೂರು ಮಧ್ಯ ವಾರಾಹಿ ನದಿಗೆ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ವೇಳೆ ಹೊಸದಾಗಿ ಸೇತುವೆ ನಿರ್ಮಿಸಲಾಗಿದೆ. ಕುಂದಾಪುರದಿಂದ ಬೈಂದೂರು ಕಡೆಗೆ ಹಳೇ ಸೇತುವೆಯಲ್ಲಿ ಸಂಚರಿಸಲು ಅವಕಾಶ ಮಾಡಿದ್ದರೆ, ಬೈಂದೂರಿನಿಂದ ಕುಂದಾಪುರ ಕಡೆಗೆ ಸಂಚರಿಸಲು ಹೊಸ ಸೇತುವೆಯಲ್ಲಿ ಅನುವು ಮಾಡಿಕೊಡಲಾಗಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಮಹಾರಾಷ್ಟ್ರದ ಪನ್ವೇಲ್ವರೆಗಿನ ರಾ.ಹೆ.66 ಹಾದು ಹೋಗುವ ಸೇತುವೆ ಇದಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು ವಾಹನ ದಟ್ಟಣೆ ಹೆಚ್ಚಿರುತ್ತದೆ. ಸೇತುವೆ ದುಸ್ಥಿತಿ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತ್ತು.