ಹಾರಗೊಪ್ಪ ಹಳ್ಳದ ಸೇತುವೆ ದುರಸ್ತಿಪಡಿಸಿ

sri manavi
ಶೃಂಗೇರಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಗೌರಮ್ಮಗೆ ಬೇಗಾರು ಗ್ರಾಪಂ ಹಾರಗೊಪ್ಪ ಗ್ರಾಮಸ್ಥರು ಮನವಿ ಸಲ್ಲಿಸಿದರು. ವೆಂಕಟೇಶ್, ಪ್ರದೀಪ್, ಮಹೇಶ್, ಪ್ರಕಾಶ್ ಇದ್ದರು.
Published on

ಶೃಂಗೇರಿ: ಬೇಗಾರು ಗ್ರಾಮ ಪಂಚಾಯಿತಿ ಹಾರಗೊಪ್ಪ ಹಳ್ಳದ ಸೇತುವೆ ದುರಸ್ತಿಪಡಿಸಬೇಕು ಹಾಗೂ ರೈತರಿಗೆ ಎಕರೆವಾರು ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್ ಗೌರಮ್ಮ ಅವರಿಗೆ ಗ್ರಾಮಸ್ಥ ಡಾ. ಅಣ್ಣಾದೊರೈ ಮನವಿ ಮಾಡಿದರು.

ಗ್ರಾಮಸ್ಥರೊಂದಿಗೆ ತಾಲೂಕು ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಬಿದರಗೋಡಿನಿಂದ ತಾರೊಳ್ಳಿಕೊಡಿಗೆ, ಬೈಲುಬಾರು, ಕೋಟೆ, ಶುಂಠಿಹಕ್ಲು ಗ್ರಾಮಗಳಿಗೆ ಸಂಪರ್ಕ ಸಾಧಿಸುವ ಹಾರಗೊಪ್ಪ ಹಳ್ಳದ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಹರಿದು ಶಾಲಾ ಮಕ್ಕಳಿಗೆ ಹಾಗೂ ತುರ್ತು ಆರೋಗ್ಯದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಹತ್ತು ವರ್ಷಗಳಿಂದ ನಿರಂತರವಾಗಿ ಸಮಸ್ಯೆಗಳ ಕುರಿತು ಸರ್ಕಾರ, ಮೇಲಾಧಿಕಾರಿಗಳು, ಮಂತ್ರಿಗಳು ಹಾಗೂ ಶಾಸಕರ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಶಾಲಾ ಮಕ್ಕಳು ಹಾಗೂ ಕೂಲಿಕಾರ್ಮಿಕರು ಮನೆಗೆ ಬರಬೇಕಾದರೆ ಸೇತುವೆಯಲ್ಲಿ ನೀರು ಕಡಿಮೆ ಆಗುವವರೆಗೆ ಕಾಯುವ ಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.
ನಕ್ಸಲ್‌ಪೀಡಿತ ಪ್ರದೇಶವಾಗಿದ್ದ ಹಾರಗೊಪ್ಪ ಅಭಿವೃದ್ಧಿಗೆ ಆದ್ಯತೆ ಕೊಡಬೇಕಿತ್ತು. ಗ್ರಾಮಸ್ಥರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳಿಯುವಂಥ ಕಾರ್ಯವನ್ನು ಜನಪ್ರತಿನಿಧಿಗಳು ಮಾಡಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಸಿ.ಶಂಕರಪ್ಪ ಮಾತನಾಡಿ, ಕೆ.ಮಸಿಗೆ ಗ್ರಾಮದಲ್ಲಿ ಗಿರಿಜನರು ಹೆಚ್ಚಾಗಿ ವಾಸವಾಗಿದ್ದಾರೆ. ಅವರ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸವಲತ್ತು ತಲುಪುತ್ತಿಲ್ಲ. ಕೆಡಿಪಿ ಸಭೆಗಳಲ್ಲಿ ಸೇತುವೆ ದುರಸ್ತಿ ಕುರಿತು ಸಾಕಷ್ಟು ಬಾರಿ ಮಾಹಿತಿ ನೀಡಲಾಗಿದೆ. ಮಳೆಗಾಲದ ಬಳಿಕ ಈ ಕುರಿತು ಸರ್ಕಾರ ಸ್ಪಂದಿಸದಿದ್ದಲ್ಲಿ ಗ್ರಾಮಸ್ಥರೊಂದಿಗೆ ಹೋರಾಟ ನಡೆಸಲಾಗುವುದು ಎಂದರು.
ಗ್ರಾಮದ ಕೋಟೆ ವೆಂಕಟೇಶ್, ಪ್ರದೀಪ್, ಗಣಪತಿ, ಬೈಲುಬಾರು ಪ್ರಕಾಶ್, ಮಹೇಶ್, ತಾರೊಳ್ಳಿಕೂಡಿಗೆ ರೇವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net