

ಹಾನಗಲ್ಲ: ಧರ್ಮಾ ಕಾಲುವೆಯ ಉಪಕಾಲುವೆ ಅಲ್ಲಲ್ಲಿ ಒಡೆದು ನೀರು ಪೋಲಾಗುತ್ತಿದ್ದು, ಕೂಡಲೇ ದುರಸ್ತಿಗೊಳಿಸಬೇಕು ಎಂದು ಮಲಗುಂದ ಗ್ರಾಮದ ರೈತರು ಏತ ನೀರಾವರಿ ಇಲಾಖೆ ಇಂಜಿನಿಯರ್ ಅನ್ನಪೂರ್ಣಾ ಮಣಕವಾಡ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಧರ್ಮಾ ಜಲಾಶಯದ ಮುಖ್ಯ ಕಾಲುವೆಯ ಅಕ್ಕಿಆಲೂರು ಶಾಖೆಯಿಂದ ಹೊರಡುವ ಮಲಗುಂದ ಉಪಕಾಲುವೆ ಸುಮಾರು 2 ಕಿ.ಮೀ. ಯಿಂದ 3 ಕಿ.ಮೀ.ವರೆಗಿನ ವ್ಯಾಪ್ತಿಯಲ್ಲಿ ಆಗಾಗ ಒಡೆಯುತ್ತದೆ. ಹೆಚ್ಚು ಪ್ರಮಾಣದಲ್ಲಿ ನೀರು ಹರಿಸಿದಾಗ ಮತ್ತು ಅಧಿಕ ಮಳೆಯಾಗಿ ನೀರಿನ ಹರಿವು ಹೆಚ್ಚಾದಾಗ ಕಾಲುವೆ ಒಡೆಯುತ್ತಿದೆ. ಇದರಿಂದಾಗಿ ಕಾಲುವೆ ಕೆಳ ಭಾಗದಲ್ಲಿನ ಜಮೀನುಗಳಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಜಮೀನುಗಳಿಗೆ ನೀರು ನುಗ್ಗಿ ಬೆಳೆಹಾನಿ ಅನುಭವಿಸುವಂತಾಗಿದೆ. ಅಲ್ಲದೆ, ಕಾಲುವೆಯಲ್ಲಿನ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಮುಂದಿನ ಗ್ರಾಮಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಹೊಲಗಳಿಗೆ ಧರ್ವ ಕಾಲುವೆಯ ನೀರು ತಲುಪದಂತಾಗುತ್ತಿದೆ. ಕಾಲುವೆ ಒಡೆದಿರುವುದರಿಂದ ಮಲಗುಂದ ಗ್ರಾಮದ ಕೆರೆಗಳಿಗೂ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಬೇಸಿಗೆ ಅವಧಿಯಲ್ಲಿ ಜನ-ಜಾನುವಾರುಗಳಿಗೆ ಮಲಗುಂದ ಕೆರೆಗಳ ನೀರು ಅಗತ್ಯವಾಗಿದೆ. ಹೀಗಾಗಿ ಕಾಲುವೆ ವಿಸ್ತರಣೆಗೊಳಿಸಿ ದುರಸ್ತಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರೈತ ಮುಖಂಡ ರಾಮಣ್ಣ ಕಾಳೇರ ಮಾತನಾಡಿ, ಹಾವಣಗಿ ಗ್ರಾಮದ ಮಣಜಗೇರಿ ಕೆರೆ, ಕಲ್ಲಾಪುರ ಗ್ರಾಮದ ಗೋಣಿಹೊಂಡ, ಚಿನ್ನಪ್ಪನಕಟ್ಟಿ ಕೆರೆಗಳ ಕೋಡಿಯಿಂದ ಹೆಚ್ಚುವರಿ ನೀರು ಬಂದು ಮಲಗುಂದ ಕಾಲುವೆ ಸೇರುತ್ತಿದೆ. ಕಾಲುವೆಯಲ್ಲಿ ಹೆಚ್ಚಿನ ನೀರು ಶೇಖರಣೆಗೊಂಡು ನೀರಿನ ರಭಸಕ್ಕೆ ಕಾಲುವೆ ಸಡಿಲಗೊಳ್ಳುತ್ತಿದೆ. ಇದು ಮಳೆಗಾಲದ ಸಮಯದಲ್ಲಿ ಪ್ರತಿವರ್ಷವೂ ರೈತರು ಅನುಭವಿಸಬೇಕಾದ ಸಮಸ್ಯೆಯಾಗಿದೆ. ಕಾಲುವೆಯ ಹೂಳು ತೆಗೆಸಬೇಕು. ಸಿಮೆಂಟ್ ತಡೆಗೋಡೆ ನಿರ್ವಿುಸಬೇಕು ಮತ್ತು ಕಾಲುವೆ ಅಗಲೀಕರಣಗೊಳಿಸಬೇಕು ಎಂದು ಆಗ್ರಹಿಸಿದರು.
ರೈತರಾದ ಬಸವರಾಜ ಕೋರಿ, ನಿಂಗಪ್ಪ ಕಾಳೇರ, ಪ್ರಭು ಜವಳಿ, ಎಸ್.ಎಸ್. ಪಾಟೀಲ, ಲೋಕೇಶ ಜವಳಿ, ಮಹೇಶಗೌಡ ಪಾಟೀಲ, ಈರಣ್ಣ ಸೊಲಬಣ್ಣನವರ, ಮಂಜಪ್ಪ ಹಾಳಗಲ್ಲಾಪುರ, ಪಿ.ಬಿ. ಶೇಷಗಿರಿ, ಕೌಶಿಕ್ ಪರಶಿಕ್ಯಾತಿ, ಶಿವರಾಯಪ್ಪ ಹಾನಗಲ್ಲ ಇತರರು ಇದ್ದರು.