ದೇವರಗುಡ್ಡ ರಸ್ತೆ ದುರಸ್ತಿಪಡಿಸಿ

dirty road
ಕಳಸ ದೇವರಗುಡ್ಡ ರಸ್ತೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪಿಎಸ್‌ಐ ನಿತ್ಯಾನಂದ ಗೌಡ, ವಿಮಲಾ, ಮಲ್ಲಮ್ಮ, ವಿನ್ಸಿ, ಶ್ರೀನಿವಾಸ್ ಇತರರಿದ್ದರು.
Published on

ಕಳಸ: ಹದಗೆಟ್ಟಿರುವ ದೇವರಗುಡ್ಡ ರಸ್ತೆ ದುರಸ್ತಿಪಡಿಸಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕಚ್ಚಾ ರಸ್ತೆಯಾಗಿದ್ದರೂ ಆಟೋ, ಬೈಕ್‌ನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೆವು. ಆದರೆ ನಾಲ್ಕು ದಿನಗಳ ಹಿಂದೆ ರಸ್ತೆಗೆ ಮಣ್ಣು ತಂದು ಹಾಕಿದ್ದಾರೆ. ಮಳೆ ಬಂದು ಕೆಸರಾಗಿ ಯಾವುದೇ ವಾಹನ ಊರಿಗೆ ಬರದಂತಾಗಿದೆ. ಎರಡು ಕಿಮೀ ದೂರ ನಡೆದುಕೊಂಡು ಬಂದು ಮುಖ್ಯರಸ್ತೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿದೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.
ದೇವರಗುಡ್ಡ-ಬಿಳುಗೋಡು ಗ್ರಾಮದ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿಕೊಡಿ ಎಂದು ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ. ಈ ಹಿಂದಿನ ಶಾಸಕರು ಕಾಕ್ರಿಟೀಕರಣಕ್ಕೆ 75 ಲಕ್ಷ ರೂಪಾಯಿ ಮಂಜೂರು ಮಾಡಿದ್ದರು. ಆದರೆ ಕಾಮಗಾರಿ ಪ್ರಾರಂಭವಾಗಲಿಲ್ಲ. ಶಾಸಕಿ ನಯನಾ ಮೋಟಮ್ಮ ಕಾಮಗಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂದು ಆರೋಪಿಸಿದರು.
ಸ್ಥಳಕ್ಕೆ ಪಿಎಸ್‌ಐ ನಿತ್ಯಾನಂದ ಗೌಡ ಬಂದು ಮಾತುಕತೆ ನಡೆಸಿದರು. ಸಂಬಂಧಪಟ್ಟವರಿಗೆ ವರದಿ ಕಳಿಸಿ ಸೆ.23ರ ಒಳಗೆ ನಿಮಗೆ ಮಾಹಿತಿ ನೀಡುತ್ತೇನೆ. ಗ್ರಾವೆಲ್ ಹಾಕುವುದಾದರೆ ಅದಕ್ಕೂ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರು.
ಕಳಸ ಗ್ರಾಪಂ ಅಧ್ಯಕ್ಷೆ ಉಷಾ, ಉಪಾಧ್ಯಕ್ಷ ರಂಗನಾಥ್ ಸ್ಥಳಕ್ಕೆ ಭೇಟಿ ನೀಡಿ ದೂರವಾಣಿಯಲ್ಲಿ ಪಂಚಾಯತ್ ರಾಜ್ ಎಇ ಬಳಿ ಮಾತನಾಡಿದಾಗ, ಚುನಾವಣೆಯವರೆಗೆ ಕಾಮಗಾರಿ ನಡೆಯದೆ ಇರುವುದರಿಂದ ಈಗಿನ ಸರ್ಕಾರ ಕಾಮಗಾರಿ ತಡೆಹಿಡಿದಿದೆ ಎಂದು ಮಾಹಿತಿ ನೀಡಿದರು.
ಸೆ.23ರವರೆಗೆ ಕಾಯುತ್ತೇವೆ. ನಮಗೆ ಯಾವುದೇ ರೀತಿಯ ಸ್ಪಂದನೆ ಸಿಗದೆ ಇದ್ದರೆ ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮದ ರಾಘವೇಂದ್ರ ಹೇಳಿದರು.
ಗ್ರಾಮದ ಆನಂದ, ಸುರೇಶ, ಕಾಳಯ್ಯ, ವಿಮಲಾ, ಲಿಂಗಮ್ಮ, ಮಲ್ಲಮ್ಮ, ವಿನ್ಸಿ, ಶ್ರೀನಿವಾಸ್, ಗೋಪಾಲ ಶೆಟ್ಟಿ, ರಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net