

ಕೊಕಟನೂರ: ಅಥಣಿ ತಾಲೂಕಿನ ಪ್ರವಾಹ ಪೀಡಿತ ಹಾಗೂ ಕೃಷ್ಣಾ ನದಿ ದಡದಲ್ಲಿರುವ ಹಲ್ಯಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ.
ಘಟಕ ದುರಸ್ತಿಯಾಗಿ ಆರು ತಿಂಗಳು ಗತಿಸಿದರೂ ಸಂಬಂಧಪಟ್ಟ ಆಡಳಿತ ಮಂಡಳಿ ಘಟಕ ದುರಸ್ತಿಗೆ ಮುಂದಾಗುತ್ತಿಲ್ಲ. ಇದರಿಂದ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಮರಿಚಿಕೆಯಾಗಿದೆ. ಗ್ರಾಮ 5 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಈ ಘಟಕವನ್ನೇ ಆಶ್ರಯಿಸಿದ್ದಾರೆ.ಆದರೂ, ಘಟಕ ಹಾಳಾದ ಕಾರಣ 2 ಕಿ.ಮೀ. ದೂರದಲ್ಲಿರುವ ಶಿವಲಿಂಗೇಶ್ವರ ನಗರದಲ್ಲಿನ ಘಟಕದಿಂದ ಶುದ್ಧ ನೀರು ತಂದು ನೀರು ಕುಡಿಯುತ್ತಿದ್ದಾರೆ.
ಘಟಕ ದುರಸ್ತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ. ಇಒ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಘಟಕ ದುರಸ್ಥಿಗೊಳಿಸುಂತೆ ಒತ್ತಾಯಿಸಿದರೆ ತಾಂತ್ರಿಕ ದೋಷವಾಗಿದೆ. ಗುತ್ತಿಗೆದಾರರಿಗೆ ಹೇಳಲಾಗಿದೆ. ನಾಳೆ ಮಾಡುತ್ತಾರೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಆದರೂ ದುರಸ್ತಿ ಮಾಡುತ್ತಿಲ್ಲ. ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ಧರಣಿ ಅನಿವಾರ್ಯ. ಚಿದಾನಂದ ಮುಕಣಿ, ಸ್ಥಳೀಯ ನಿವಾಸಿ.
ಘಟಕದ ದುರಸ್ತಿಗೆ ಅನುದಾನದ ಕೊರತೆ ಉಂಟಾಗಿದೆ. 14ನೇ ಹಣಕಾಸಿನ ಯೋಜನೆಯಡಿ ಘಟಕ ದುರಸ್ಥಿಗೆ ಪ್ರಸ್ಥಾವನೆ ಕಳಿಸುವಂತೆ ಪಿಡಿಒಗೆ ಸೂಚಿಸಲಾಗುವದು. ಅನುದಾನ ಬಂದ ತಕ್ಷಣ ಘಟಕ ದುರಸ್ತಿ ಮಾಡಲಾಗುವುದು. | ರವಿ ಬಂಗಾರೇಪ್ಪನವರ, ತಾಪಂ ಇಒಅಥಣಿ