ಬಾಳಗೋಡ ಬಸ್ ನಿಲ್ದಾಣ ದುರಸ್ತಿಗೊಳಿಸಿ

14sdp3 BUS
Published on

ಸಿದ್ದಾಪುರ: ತಾಲೂಕಿನ ಕ್ಯಾದಗಿ ಗ್ರಾಪಂ ವ್ಯಾಪ್ತಿಯ ವಂದಾನೆ ಮುಖ್ಯ ರಸ್ತೆಯಲ್ಲಿರುವ ಬಾಳಗೋಡ ಬಸ್ ನಿಲ್ದಾಣದ ಮೇಲ್ಛಾವಣಿಗೆ ಅಳವಡಿಸಿದ ತಗಡಿನ ಶೀಟ್ ಮಳೆಗಾಲದಲ್ಲಿಯೇ ಬಿದ್ದಿದ್ದು, ಈವರೆಗೂ ದುರಸ್ತಿ ಮಾಡದೇ ಇರುವುದರಿಂದ ನಿತ್ಯ ಪ್ರಯಾಣಿಕರು ಬಿಸಿಲಿನಲ್ಲಿ ನಿಂತು ಬಸ್​ಗಾಗಿ ಕಾಯುವ ಸ್ಥಿತಿ ಇದೆ.

ಕ್ಯಾದಗಿ ಹಾಗೂ ವಾಜಗೋಡ ಗ್ರಾಪಂ ಗಡಿಭಾಗದಲ್ಲಿರುವ ಈ ಬಸ್ ನಿಲ್ದಾಣ ಕ್ಯಾದಗಿ ಗ್ರಾಪಂ ವ್ಯಾಪ್ತಿಗೆ ಬರುತ್ತಿದ್ದು, ಈ ಬಸ್ ನಿಲ್ದಾಣವನ್ನು ಕಳೆದ ಏಳೆಂಟು ವರ್ಷದ ಹಿಂದೆ ತಾಪಂ ಅನುದಾನದಲ್ಲಿ ನಿರ್ಮಾಣ ಮಾಡಲಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಕಳೆದ ಮಳೆಗಾಲದಲ್ಲಿಯೇ ಬಸ್ ನಿಲ್ದಾಣದ ಮೇಲ್ಛಾವಣಿ ಬಿದ್ದಿದೆ. ಅಂದರೆ ಈಗ ಮೂರ್ನಾಲ್ಕು ತಿಂಗಳುಗಳೇ ಆಗಿದ್ದರೂ ಸಂಬಂಧಪಟ್ಟ ಗ್ರಾಪಂ ಆಗಲಿ, ತಾಪಂ ಬಸ್ ನಿಲ್ದಾಣ ಮೇಲ್ಛಾವಣಿ ದುರಸ್ತಿ ಮಾಡಿಲ್ಲ. ಮಳೆಗಾಲವನ್ನೂ ಕಳೆದಾಯ್ತು. ಈಗ ಬೇಸಿಗೆ ಆರಂಭವಾಗಿದೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಎಲ್ಲರೂ ಬಿಸಿಲಿನಲ್ಲಿಯೇ ನಿಲ್ಲುವ ದುಸ್ಥಿತಿ ಬಂದಿದೆ. ಸಂಬಂಧಪಟ್ಟ ತಾಲೂಕಾಡಳಿತ ಬಸ್ ನಿಲ್ದಾಣಕ್ಕೆ ಮೇಲ್ಛಾವಣಿ ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಿತ್ಯ ಸಂಚರಿಸುವ ಪ್ರಯಾಣಿಕರಿಗೆ, ಶಾಲಾ ಮಕ್ಕಳು ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಬಿಸಿಲು ಹಾಗೂ ಮರದ ನೆರಳಿನಲ್ಲಿ ನಿಂತು ಬಸ್​ಗಾಗಿ ಕಾಯುವ ಸ್ಥಿತಿ ಎದುರಾಗಿದೆ. ತಾಲೂಕಾಡಳಿತ ವಿಶೇಷ ಕಾಳಜಿವಹಿಸಿ ಶೀಘ್ರವೇ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲತೆ ಮಾಡಿಕೊಡಬೇಕು. | ಕೃಷ್ಣಮೂರ್ತಿ ನಾಯ್ಕ ವಾಜಗೋಡ ಗ್ರಾಪಂ ಸದಸ್ಯ

ಸಂಬಂಧಪಟ್ಟ ಕ್ಯಾದಗಿ ಗ್ರಾಪಂನವರು ಬಾಳಗೋಡ ಬಸ್ ನಿಲ್ದಾಣದ ಕುರಿತು ಯಾವ ಕ್ರಮ ಕೈಗೊಂಡಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ. ಬಸ್ ನಿಲ್ದಾಣದ ಸ್ಥಿತಿ ತಿಳಿದು ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. | ದೇವರಾಜ ಹಿತ್ತಲಕೊಪ್ಪ ಸಿದ್ದಾಪುರ ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net