

ಮಂಡ್ಯ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಲಿಂಗಾಯತ ಮಹಾಸಭಾ ಹಾಗೂ ಮದ್ದೂರು ಅರ್ಚಕರ ಸಂಘ ಎಚ್ಚರಿಕೆ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಹಾಗೂ ಅರ್ಚಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ, ಆಶ್ಲೀಲ ಸಂದೇಶವನ್ನು ಕಳುಹಿಸಿದ್ದಾರೆನ್ನುವುದಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಬೆಂಬಲಿಗರು ಜೂ.8ರಂದು ರೇಣುಕಾಸ್ವಾಮಿ ಬೆಂಗಳೂರಿಗೆ ಕರೆದುಕೊಂಡು ಬಂದು ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ದರ್ಶನ್ ನಟನಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸುವುದನ್ನು ಬಿಟ್ಟು ದುರ್ನಡತೆ, ಅಹಂನಿಂದ ಎಷ್ಟು ಜನರನ್ನು ಬಲಿ ತೆಗೆದುಕೊಂಡಿರಬಹುದು ಎಂಬುದರ ಬಗ್ಗೆ ತನಿಖೆಯಾಗಬೇಕಿದೆ. ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಆತನಿಗೆ ಕಾನೂನಿನ ರೀತಿ ಬುದ್ಧಿ ಕಲಿಸಬಹುದಿತ್ತು. ಆದರೆ ದುಷ್ಟ ಬುದ್ಧಿಯಿಂದ ಕೊಲೆ ಮಾಡಿರುವುದು ಖಂಡನೀಯ. ಇವರಿಗೆ ಕಾನೂನಿನ ರೀತಿ ಕಠಿಣ ಶಿಕ್ಷೆ ವಿಧಿಸಬೇಕು. ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.