ರೇಣುಕಾಚಾರ್ಯರ ತತ್ತ್ವಾದರ್ಶ ಅಳವಡಿಸಿಕೊಳ್ಳೋಣ : ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಅಭಿಮತ

IMG-20230316-WA0036.jpg
Published on

ಬೆಳಗಾವಿ : ಸಮಾಜದಲ್ಲಿ ಶಾಂತಿ ನೆಲೆಸಲಿ ಎಂದೇ ರೇಣುಕಾಚಾರ್ಯರರು ಮಾನವ ಕುಲಕ್ಕೆ ಜಯವಾಗಲಿ ಎಂದು ಪ್ರತಿಪಾದನೆ ಮಾಡಿದ್ದಾರೆ.  ಸಮಾಜದಲ್ಲಿ ಬದುಕುತ್ತಿರುವ ನಾವುಗಳು ಪರಸ್ಪರ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು  ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಹೇಳಿದರು.
ಗುರುವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಸಹಯೋಗದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಯುಗಮಾನೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರು ಹಾಗೂ ಬಸವೇಶ್ವರರ ತತ್ವಾದರ್ಶಗಳನ್ನು ನಮ್ಮ ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಮಾತ್ರ ರೇಣುಕಾಚಾರ್ಯರು ಸೀಮಿತವಾಗಿಲ್ಲ. ಎಲ್ಲ ಸಮಾಜದ ಏಳಿಗೆಗಾಗಿ ಶ್ರಮಿಸಿದರು. ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಭಾರತ ದೇಶ ಶಾಂತಿಯನ್ನು ಬಯಸುತ್ತದೆ. ಅದು ರೇಣುಕಾಚಾರ್ಯರ ವಿಚಾರವೂ ಅದೇ ಆಗಿತ್ತು. ಜಗದ್ಗುರು ರೇಣುಕಾಚಾರ್ಯರ ಜಯಂತಿ ಪ್ರತಿ ವರ್ಷ ಮಾ. 5 ರಂದು ಸರಕಾರ ಆಚರಣೆ ಮಾಡಲು ಸೂಚನೆ ನೀಡಿದೆ. ಅದರಂತೆ ರೇಣುಕಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ ಅವರನ್ನು ಕೇವಲ ಜಂಗಮ ಸಮಾಜಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಲ್ಲ ಸಮಾಜದವರು ಆರಾಧಿಸುವ ಜಗದ್ಗುರು ರೇಣುಕಾಚಾರ್ಯರು ಎಂದರು.
ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಬೋಧಿಸಿದರು. ರೇಣುಕಾಚಾರ್ಯ ಅಗಸ್ತಯ ಮಹರ್ಷಿಗೆ ಬೋಧಿಸಿದ ಮಹಾನ್ ಗ್ರಂಥವನ್ನು ಮುದ್ರಿಸಿದ ಕೀರ್ತಿ ಕಾರಂಜಿಮಠದ ಶ್ರೀಗಳಿಗೆ ಸಲ್ಲುತ್ತದೆ. ರೇಣುಕಾಚಾರ್ಯರು ರೇವಣ ಸಿದ್ಧರಾಗಿ ಅವಾತರ ತಾಳಿದವರು. ನಮಗೆ ಜಾತಿ, ಪಂಥ, ಬೇಧ ಭಾವ ಇರಬಾರದು ಎಲ್ಲರನ್ನು ಪ್ರೀತಿಸುವ ಕೆಲಸ ಮಾಡಿ, ರೇಣುಕಾಚಾರ್ಯರು ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸವಡಿಮಠ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಶಿವನಗೌಡ ಪಾಟೀಲ, ಮುಕ್ತಾರ ಪಠಾಣ, ಮಹಾಂತ ವಕ್ಕುಂದ, ಮಹಾಂತೇಶ ರಣಗಟ್ಟಿಮಠ, ಗಣೇಶ ಮಠಪತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net