

ವಿಜಯಪುರ: ಜಗದ್ಗುರು ರೇಣುಕಾಚಾರ್ಯರು ತತ್ವ, ಸಿದ್ಧಾಂತಗಳ ಮೂಲಕ ಜಗತ್ತಿಗೆ ಶಾಂತಿ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಣುಕಾಚಾರ್ಯರರು ಮಾನವ ಜನಾಂಗದ ಏಳಿಗೆ, ಸಮಾಜದಲ್ಲಿನ ನ್ಯೂನ್ಯತೆ ಹಾಗೂ ಮೌಢ್ಯತೆಗಳನ್ನು ತೊಲಗಿಸಿ ಸನ್ಮಾರ್ಗ ತೋರಿದರು. ಇಂತಹ ಮಹನೀಯರ ತತ್ವಾದರ್ಶ ಹಾಗೂ ವಿಚಾರಗಳು ಸಾರ್ವಕಾಲಿಕ. ಯುವಜನತೆ ಮಹನೀಯರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಹಾದೇವಯ್ಯ ಶಾಸ್ತ್ರಿ ಉಪನ್ಯಾಸ ನೀಡಿ, ಜಗದ್ಗುರು ರೇಣುಕಾಚಾರ್ಯರು ಸರ್ವರ ಒಳಿತನ್ನು ಬಯಸುವ ದಿಸೆಯಲ್ಲಿ ಶ್ರಮಿಸಿದ್ದರು. ಮೌಢ್ಯತೆ ತೊರೆದು ಉತ್ತಮ ಬದುಕು ಕಟ್ಟಿಕೊಳ್ಳುವ ದಿಸೆಯಲ್ಲಿನ ಅವರ ಚಿಂತನೆಗಳನ್ನು ಅರಿತುಕೊಳ್ಳಬೇಕು. ನಾವೆಲ್ಲ ಸಹಬಾಳ್ವೆಯಿಂದ ಬದುಕುವ ನಿಟ್ಟಿನಲ್ಲಿ ರೇಣುಕಾಚಾರ್ಯರು ಸಮಾಜಕ್ಕೆ ಅವರ ಚಿಂತನೆಗಳ ಮೂಲಕ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.
ಮಾಳವಿಕಾ ಜೋಶಿ ಸುಗಮ ಸಂಗೀತ ಪ್ರಸ್ತುತ ಪಡಿಸಿದರು. ಪಾಲಿಕೆಯ ಉಪ ಆಯುಕ್ತ ವೈ.ಎ. ನಾರಾಯಣಕರ, ಜಿ.ಪಂ. ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ. ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಡಿವೈಎಸ್ಪಿ ಡಿ.ಎಸ್. ಧನಗರ, ಸಂಜೀವ ಹಿರೇಮಠ, ಎಸ್.ಎಸ್. ಹಿರೇಮಠ, ಗುರು ಗಚ್ಚಿನಮಠ, ಎನ್.ಆರ್. ಮಠ, ವಿಜಯಕುಮಾರ ಹಿರೇಮಠ ಹಿರೂರು, ಚಿದಾನಂದ ಹಿರೇಮಠ, ಪುಷ್ಪಾ ಹಿರೇಮಠ ಮತ್ತಿತರರಿದ್ದರು.
ಇದಕ್ಕೂ ಮುನ್ನ ನಗರದ ದೇವಸ್ಥಾನದಿಂದ ನಡೆದ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಗೆ ಜಿಪಂ ಯೋಜನಾ, ಅಂದಾಜು ಮತ್ತು ಮೌಲ್ಯ ಮಾಪನ ಅಧಿಕಾರಿ ಎ.ಬಿ. ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಚಾಲನೆ ನೀಡಿದರು.
ಮೆರವಣಿಗೆಯು ಗಾಂಧಿ ವೃತ್ತ, ಬಸವೇಶ್ವರ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಸಂಚರಿಸಿ ರಂಗಮಂದಿರದಲ್ಲಿ ಸಮಾವೇಶಗೊಂಡಿತು. ವಿದ್ಯಾವತಿ ಅಂಕಲಗಿ, ದೇವೇಂದ್ರ ಮಿರೇಕರ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರು, ಗಿರೀಶ ಕುಲಕರ್ಣಿ ಇತರರಿದ್ದರು.